

ಮಂಡ್ಯ: ಅಮೆರಿಕ ಅಧ್ಯಕ್ಷರ ವೈದ್ಯಕೀಯ ಸಲಹೆಗಾರ ಡಾ.ವಿವೇಕ್ ಮೂರ್ತಿ ಅವರ ತಂದೆ, ಅನಿವಾಸಿ ಭಾರತೀಯ ಡಾ.ಲಕ್ಷ್ಮೀ ನರಸಿಂಹಮೂರ್ತಿ ಹಲ್ಲೇಗೆರೆ ಅವರು ಭೂತಾಯಿ ಟ್ರಸ್ಟ್ ಸಂಸ್ಥೆಯ ಮೂಲಕ ಮಹತ್ತರ ಸಾಮಾಜಿಕ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಘೋಷಿಸಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘ, ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ನಾಗರಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಡಾ.ಲಕ್ಷ್ಮೀನರಸಿಂಹ ಮೂರ್ತಿ ಹಲ್ಲೇಗೆರೆ ಅವರಿಗೆ ನಾಗರಿಕ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮಂಡ್ಯದಲ್ಲಿ 80 ಕೋಟಿ ರೂ.ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಮತ್ತು ಧ್ಯಾನ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಇದಕ್ಕೆ ಮಂಡ್ಯ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮೂಲಕ ಸಹಕಾರ ನೀಡಲು ನಾನು ಬದ್ಧವಾಗಿದ್ದೇನೆ ಎಂದು ಭರವಸೆ ನೀಡದರು.
ಭೂತಾಯಿ ಟ್ರಸ್ಟ್ ಎಂಬ ಸಂಸ್ಥೆ ಮೂಲಕ ತಾಯ್ನಡು ಮಂಡ್ಯದ ಋಣವನ್ನು ತೀರಿಸಲು ಡಾ. ಲಕ್ಷ್ಮೀನರಸಿಂಹಮೂರ್ತಿ ಹಲ್ಲೇಗೆರೆ (ಡಾ. ಎಲ್.ಎಲ್. ಮೂರ್ತಿ) ಅವರ ಕುಟುಂಬ ಸಾಕಷ್ಟು ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ. ಮಂಡ್ಯದಲ್ಲಿ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ 12 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಮತ್ತು ಧ್ಯಾನ ಕೇಂದ್ರವನ್ನು ಸ್ಥಾಪನೆ ಮಾಡಲು ಮುಂದಾಗಿರುವುದು ಶ್ಲಾಘನೀಯ. ಈ ಯೋಜನೆಯ ಶಂಕುಸ್ಥಾಪನೆಯು 2023ರ ಡಿಸೆಂಬರ್‌ನಲ್ಲಿ ನಡೆಯಲಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ಹಾಗೂ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂತಹ ಒಂದು ಅಂತಾರಾಷ್ಟ್ರೀಯ ಮಟ್ಟದ ಕೇಂದ್ರ ನಮ್ಮ ಜಿಲ್ಲೆಯಲ್ಲಿ ಆಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇದಕ್ಕೆ ಜಿಲ್ಲೆಯ ಜನರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಇಂದು ವಿಶ್ವದ ಅಗ್ರಗಣ್ಯ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷರ ವೈದ್ಯಕೀಯ ಸಲಹೆಗಾರರಾಗಿ ಡಾ.ವಿವೇಕ್‌ಮೂರ್ತಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಮಟ್ಟಕ್ಕೆ ಇವರ ಪುತ್ರ ಹೋಗಬೇಕೆಂದರೆ ಅವರಿಗೆ ಉತ್ತಮ ಜ್ಞಾನ, ಶಿಕ್ಷಣ, ಚಿಂತನೆ ಸಂಸ್ಕಾರವನ್ನು ಕೊಡಬೇಕಾಗುತ್ತದೆ. ಇಂತಹ ಒಂದು ಕೆಲಸವನ್ನು ಡಾ.ಎಲ್.ಎನ್.ಮೂರ್ತಿ ಅವರು ಮಾಡಿದ್ದಾರೆ. ಹೀಗಾಗಿ ತಮ್ಮ ಕಣ್ಣ ಮುಂದೆಯೇ ಪುತ್ರ ಅಮೆರಿಕದ ವೈಟ್‌ಹೌಸ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನೋಡುತ್ತಿದ್ದಾರೆ. ಇದು ತಂದೆ-ತಾಯಿಯರ ಪುಣ್ಯದ ಫಲವೇ ಸರಿ ಎಂದರು.
ಶಾಸಕ ರವಿಕುಮಾರ್ ಗಣಿಗ, ಮಾಜಿ ಶಾಸಕ ಎಂ.ಶ್ರೀನಿವಾಸ್, ಮಾಜಿ ಎಂಎಲ್ಸಿ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಡಾ.ಶಿವಮೂರ್ತಿ ಕೀಲಾರ ಇತರರು ಇದ್ದರು.