

ಉಡುಪಿ: ನಗರವನ್ನು ಸ್ಚಚ್ಛವಾಗಿಡುವಲ್ಲಿ ಅವಿರತ ಶ್ರಮಿಸುತ್ತಿರುವ ಪೌರಕಾರ್ಮಿಕರು ನಿಜಕ್ಕೂ ಭಾರತರತ್ನರು. ಅವರ ಅವಿರತ ಶ್ರಮವನ್ನು ಗುರುತಿಸಿ ಸನ್ಮಾನಿಸಿರುವುದು ಅತ್ಯಂತ ಸಂತಸದ ಕ್ಷಣವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ನಗರಸಭೆ ಶನಿವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಷನಲ್ ಸಾಯಿ ಕರ್ಮಚಾರಿ ಡೆವೆಲಪ್ಮೆಂಟ್ ಅಥಾರಿಟಿ ಪೌರಕಾರ್ಮಿಕರಿಗೆ ಅನೇಕ ಸೌಲಭ್ಯವನ್ನು ನೀಡಿದೆ. ಇಲ್ಲಿ ಸಿಗುವ ಸೌಲಭ್ಯಗಳನ್ನು ಎಲ್ಲ ಪೌರಕಾರ್ಮಿಕರಿಗೆ ತಿಳಿಸುವ ಕೆಲಸವನ್ನು ಜಿಲ್ಲಾಡಿತ ಮಾಡಬೇಕು. ಅಲ್ಲದೆ, ಆ ಸೌಲಭ್ಯ ಸಿಗುವಂತೆಯೂ ಕ್ರಮ ಕೈಗೊಳ್ಳಬೇಕು ಎಂದರು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಭಾರತ ಅಭಿಯಾನ ದೇಶವ್ಯಾಪಿ ಹಮ್ಮಿಕೊಂಡ ಪರಿಣಾಮವಾಗಿ ಇಂದು ಜನರಿಗೆ ಸ್ವಚ್ಛತೆಯ ಅರಿವು ಮೂಡತೊಡಗಿದೆ. ಎಲ್ಲೆಂದರಲ್ಲಿ ಕಸ ಎಸೆಯಬಾರದು ಎಂಬ ಅರಿವು ಮೂಡುತ್ತಿದೆ ಎಂದರು.
ರಾಜ್ಯಕ್ಕೆ ಮಾದರಿ:
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಈ ದೇಶದ ಸ್ವಚ್ಛತೆಯನ್ನು ಕಾಪಾಡುತ್ತಿರುವವರಲ್ಲಿ ಪೌರ ಕಾರ್ಮಿಕರೇ ಮೊದಲಿಗರು. ರಾಜ್ಯದಲ್ಲಿಯೇ ಉಡುಪಿ ಅತ್ಯಂತ ಹೆಚ್ಚು ಸ್ವಚ್ಛತೆಯಿಂದ ಕೂಡಿರುವ ನಗರವಾಗಿದೆ. ಇದಕ್ಕೆ ಇಲ್ಲಿನ ಪೌರಕಾರ್ಮಿಕರೇ ಕಾರಣರಾಗಿದ್ದಾರೆ. ಉಡುಪಿಯ ಪೌರಕಾರ್ಮಿಕರ ಸೇವೆ ರಾಜ್ಯಕ್ಕೇ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಆರೋಗ್ಯದ ಕಡೆ ಗಮನ ನೀಡಿ
ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಪೌರಕಾರ್ಮಿಕರ ಕೆಲಸ ಅತ್ಯಂತ ಶ್ರೇಷ್ಠಮಟ್ಟದ ಕಾರ್ಯವಾಗಿದೆ. ನಗರ ವಾಸಿಗರ ಆರೋಗ್ಯಕ್ಕಾಗಿ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುವ ಅವರೂ ಆರೋಗ್ಯದ ಕಡೆಗೆ ಗಮನ ನೀಡಬೇಕು. ದುಶ್ಚಟಗಳನ್ನು ತ್ಯಜಿಸಬೇಕು. ಸ್ವಚ್ಛತಾ ಕಾರ್ಯದ ವೇಳೆ ಸೂಕ್ತ ಸಲಕರಣೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕು. ಇದರೊಟ್ಟಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು. ನಗರಸಭೆಯಲ್ಲಿಯೇ ನಿಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಲು ಸೌಲಭ್ಯಗಳಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಇತ್ತೀಚೆಗೆ ಆಯೋಜಿಸಿದ್ದ ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನಗರಸಭೆ ಅಧ್ಯಕ್ಷ ಶ್ರೀಶ ಭಟ್, ನಗರಸಭೆಯ ನಿಕಟಪೂರ್ವ ಅಧ್ಯೆ ಸುಮಿತ್ರಾ ನಾಯಕ್, ನಿಕಟಪೂರ್ವ ಉಪಾಧ್ಯೆ ಲಕ್ಷಿ ಸಾಲ್ಯಾನ್, ನಗರಸಭೆ ಸದಸ್ಯೆ ರಶ್ಮಿ ಸಿ. ಭಟ್, ಸ್ವಚ್ಛ ಭಾರತ ಆಂದೋಲನದ ಉಡುಪಿ ರಾಯಭಾರಿ ಜೊಸ್ ರೆಬೆಲ್ಲೊ, ಪೌರಾಯುಕ್ತ ರಾಯಪ್ಪ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.