

ಮಂಡ್ಯ: ನಾಗರಿಕರ ಆರೋಗ್ಯಕ್ಕೆ ಪೂರಕವಾಗಿ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಆರೋಗ್ಯ ಸಹ ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪೌರ ಕಾರ್ಮಿಕರಿಗೆ ನಗರಸಭೆಯಿಂದ ಕ್ರೀಡಾಕೂಟ ಏರ್ಪಡಿಸಲಾಗಿದೆ. ಮಾನಸಿಕ ಹಾಗೂ ದೈಹಿಕವಾಗಿ ಗಟ್ಟಿಗೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ತಿಳಿಸಿದರು.
ನಗರದ ಸರ್.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಗರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರು ಭಾಗವಹಿಸುವುದೇ ದೊಡ್ಡ ವಿಚಾರ. ಕ್ರೀಡಾಪಟುಗಳಿಗೆ ಎಲ್ಲ ಸೌಲಭ್ಯವಿದೆ. ಎಲ್ಲವನ್ನು ಬಳಸಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದು ತಿಳಿಸಿದರು.
ಸದಸ್ಯ ಎಚ್.ಎಸ್.ಮಂಜು ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲು ಗೆಲುವು ಮುಖ್ಯ ಅಲ್ಲ ಎಲ್ಲರೂ ಭಾಗವಹಿಸುವುದೇ ಮುಖ್ಯ. ಕ್ರೀಡಾಕೂಟವನ್ನು ಸರ್ಕಾರ ಪೌರಕಾರ್ಮಿಕರಿಗಾಗಿ ಆಯೋಜಿಸಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಮಾತನಾಡಿ, ಪ್ರತಿಯೊಬ್ಬರು ಕ್ರೀಡಾ ಸ್ಪೂರ್ತಿ ಯಿಂದ ಆಟ ಆಡಿ. ಪ್ರತಿದಿನ ಒಂದಲ್ಲ ಒಂದು ಕ್ರೀಡೆಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯ ಚೆನ್ನಾಗಿರುತ್ತದೆ. ಪ್ರತಿಯೊಬ್ಬರು ಕ್ರೀಡಾಕೂಟದಲ್ಲಿ ಎಲ್ಲರೂ ಭಾಗವಹಿಸಿ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರವಿ, ಸದಸ್ಯರಾದ ಮಂಜುಳಾ ಉದಯ್‌ಶಂಕರ್, ಪೂರ್ಣಿಮಾ, ಮಂಜುಳಾ, ಲಲಿತಾ, ಸೌಭಾಗ್ಯಾ, ಕುಮಾರ್, ಪರಿಸರ ಇಂಜಿನಿಯರ್ ರುದೇಗೌಡ ಇತರರಿದ್ದರು. ಇದೇ ವೇಳೆ ಪೌರಕಾರ್ಮಿಕರಿಗಾಗಿ ಹಗ್ಗಜಗ್ಗಾಟ, ರನ್ನಿಂಗ್, ಶಾಟ್‌ಪುಟ್, ಮ್ಯೂಸಿಕಲ್ ಚೇರ್, ಲೆಮನ್ ಸ್ಪೂನ್ ಸೇರಿದಂತೆ ಹಲವು ಸ್ಪರ್ಧೆ ನಡೆಯಿತು.