ಪೌರ ಕಾರ್ಮಿಕರೂ ಸೈನಿಕರಿದ್ದಂತೆ

ಪೌರಕಾರ್ಮಿಕರ ದಿನ
ಆಲೂರು ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನ ಆಚರಣೆ ಕಾರ್ಯಕ್ರಮದಲ್ಲಿ 21 ಜನ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.
Published on

ಆಲೂರು: ಸೈನಿಕರು ವಿರೋಧಿಗಳ ಗುಂಡಿಗೆ ಬಲಿಯಾದರೆ, ಪೌರ ಕಾರ್ಮಿಕರು ಗುಂಡಿ ಸ್ವಚ್ಛ ಮಾಡಲು ಬಲಿಯಾಗುತ್ತಿದ್ದಾರೆ. ಪೌರ ಕಾರ್ಮಿಕರೂ ದೇಶ ಕಾಯುವ ಸೈನಿಕರಿದ್ದಂತೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹೇರ ಬೇಗಂ ಹೇಳಿದರು.


ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೈನಿಕರು ದೇಶ ರಕ್ಷಣೆ ಮಾಡಿದರೆ, ಪೌರ ಕಾರ್ಮಿಕರು ಊರು, ಕೇರಿ ಸ್ವಚ್ಛಗೊಳಿಸಿ ಎಲ್ಲ ಆರೋಗ್ಯ ಕಾಪಾಡುತ್ತಿದ್ದಾರೆ. ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಅಧಿಕಾರಿಗಳ ಮುಂದೆ ಕೈ ಚಾಚುವ ಕಾರ್ಮಿಕರಾಗಿ ಮಾಡದೆ, ಅಧಿಕಾರಿಗಳೇ ನಮಸ್ಕಾರ ಮಾಡುವಂತಹ ದೊಡ್ಡ ವ್ಯಕ್ತಿಯಾಗಿ ಮಾಡುವುದಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದರು.


ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ಮಾತನಾಡಿ, ಪೌರ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ, ವಿಮೆ ಸೌಲಭ್ಯ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳನ್ನು ಕಾನೂನು ಚೌಕಟ್ಟಿನಲ್ಲಿ ಕಲ್ಪಿಸಲಾಗುತ್ತಿದೆ. ಅದನ್ನು ಎಲ್ಲರೂ ಬಳಸಿಕೊಳ್ಳಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದೆ. ಪೌರಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಪೌರ ಕಾರ್ಮಿಕರು ಮೆರವಣಿಗೆ ನಡೆಸಿದರು. ಬೆಳಗ್ಗೆಯೇ ಪಟ್ಟಣದ ಸ್ವಚ್ಛತೆಯ ಕಾರ್ಯ ಪೂರ್ಣಗೊಳಿಸಿ, ನಿತ್ಯದ ಸಮವಸ್ತ್ರಗಳನ್ನು ಬದಿಗಿಟ್ಟು ಬಿಳಿ ಅಂಗಿ, ಪಂಚೆ ಧರಿಸಿದ್ದರೆ, ಮಹಿಳೆಯರು ಅಂಚಿನ ಸೀರೆ ಧರಿಸಿ ಹೆಜ್ಜೆ ಹಾಕಿದರು. ಎಲ್ಲರಲ್ಲೂ ಸಂಭ್ರಮ ಮನೆ ಮಾಡಿತ್ತು ವೇದಿಕೆ ಕಾರ್ಯಕ್ರಮ ಸಂದರ್ಭದಲ್ಲಿ ಎಲ್ಲಾ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯರಾದ ಹರೀಶ್, ಧರ್ಮ, ಸಂತೋಷ್, ತೌಫಿಕ್ ಅಹಮದ್, ಅಬ್ದುಲ್ ಖುದ್ದೂಸ್, ಬಿ.ಪಿ.ರಾಣಿ, ವೇದಾ ಸುರೇಶ್, ಪಪಂ ಪ್ರಭಾರ ಆರೋಗ್ಯಾಧಿಕಾರಿ ಜ್ಯೋತಿ, ಸಿಬ್ಬಂದಿ ಮಂಜುನಾಥ್, ಗಣೇಶ್, ರಾಜಲಕ್ಷ್ಮೀ, ಜಯಲಕ್ಷ್ಮೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net