ಕಲೆಕ್ಟ್ರೇಟ್ ವಠಾರದಲ್ಲೇ ಸ್ವಚ್ಛತೆಗಿಲ್ಲ ಆದ್ಯತೆ : ಸಿವಿಲ್ ಸ್ಟೇಷನ್ ಪರಿಸರ ತ್ಯಾಜ್ಯಮಯ ಹೊಂಡಬಿದ್ದ ರಸ್ತೆಗಳು : ಜನತೆಗಷ್ಟೆ ಬೋಧನೆ

road
ಜಿಲ್ಲಾಧಿಕಾರಿ ಕಚೇರಿ ವಠಾರದ ಕ್ಯಾಂಟೀನ್ ಕಟ್ಟಡ ಸುತ್ತು ತರಗೆಲೆ ತುಂಬಿಕೊಂಡಿದೆ.
Published on

ಪುರುಷೋತ್ತಮ ಪೆರ್ಲ

ಜಿಲ್ಲೆಯ ಆಡಳಿತ ಯಂತ್ರ ಮುನ್ನಡೆಸುತ್ತಿರುವ ಪ್ರಮುಖ ಶಕ್ತಿಕೇಂದ್ರ ವಿದ್ಯಾನಗರದ ಸಿವಿಲ್ ಸ್ಟೇಷನ್ ವಠಾರ ಇಂದು ತ್ಯಾಜ್ಯಮಯವಾಗುತ್ತಿದೆ. ವಿವಿಧ ಇಲಾಖೆಗಳ ನೂರಕ್ಕೂ ಹೆಚ್ಚು ಕಚೇರಿಗಳು, ಪೊಲೀಸ್ ಠಾಣೆ, ಜಿಪಂ, ಜಿಲ್ಲಾ ಯೋಜನಾ ಕಚೇರಿ ಸೇರಿದಂತೆ ಹತ್ತು ಹಲವು ಕಟ್ಟಡಗಳು ಈ ಪ್ರದೇಶದಲ್ಲಿದ್ದು, ಇಲ್ಲಿ ಸ್ವಚ್ಛತೆ ಮರೀಚಿಕೆಯಾಗುತ್ತಿದೆ.

ಸ್ವಚ್ಛತೆ ಬಗ್ಗೆ ಊರಿಗೆ ಬೋಧನೆ ನಡೆಸುತ್ತಿರುವ ಶುಚಿತ್ವ ಮಿಷನ್, ಹಸಿರು ಕೇರಳ ಯೋಜನೆಗಳಿಗೆ ಸಂಬಂಧಿಸಿದ ಕಚೇರಿಗಳು ಸಿವಿಲ್ ಸ್ಟೇಷನ್‌ನಲ್ಲೇ ಕಾರ್ಯಾಚರಿಸುತ್ತಿದ್ದರೂ, ತಮ್ಮ ಮೂಗಿನ ನೇರಕ್ಕಿರುವ ತ್ಯಾಜ್ಯ ರಾಶಿ ಕಂಡೂಕಾಣದಂತೆ ವರ್ತಿಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೊಳ್ಳೆಗಳ ಉತ್ಪತ್ತಿ ಕೇಂದ್ರ

ಆರ್‌ಟಿಒ ಕಚೇರಿ ಹಾಗೂ ಜಿಲ್ಲಾ ಯೋಜನಾ ಕಚೇರಿ ಹೊಂದಿರುವ ಕಟ್ಟಡಗಳ ಮಧ್ಯೆ ಹಾದುಹೋಗುತ್ತಿರುವ ರಸ್ತೆ ಶಿಥಿಲಾವಸ್ಥೆಯಲ್ಲಿದ್ದರೂ, ಉಭಯ ಇಲಾಖೆಗಳೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಇನ್ನು ಸಿವಿಲ್ ಸ್ಟೇಷನ್ ಕಟ್ಟಡದ ಹಿಂಭಾಗ ಸಂಪೂರ್ಣ ತ್ಯಾಜ್ಯಮಯವಾಗಿದೆ. ಒಂದೆಡೆ ಆರ್‌ಟಿಓ ಹಾಗೂ ಇನ್ನೊಂದೆಡೆ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ವಶಪಡಿಸಿಕೊಂಡಿರುವ ವಾಹನಗಳು ತುಕ್ಕು ಹಿಡಿದು ಶಿಥಿಲಾವಸ್ಥೆ ತಲುಪಿದ್ದರೆ, ಈ ವಾಹನಗಳಿಗೆ ಕಾಡುಬೆಳೆದು, ಮಳೆಗಾಲದಲ್ಲಂತೂ ಸೊಳ್ಳೆ ಉತ್ಪತ್ತಿ ಕೇಂದ್ರಗಳಾಗಿ ಬದಲಾಗುತ್ತಿದೆ.

ವಿಲೇಯಾಗದ ಹಳೇ ವಾಹನ

ಸಿವಿಲ್ ಸ್ಟೇಷನ್ ಸುತ್ತು ಹತ್ತು ಹಲವು ಇಲಾಖೆಗಳ ಹಳೇ ವಾಹನಗಳನ್ನೂ ವಿಲೇವಾರಿ ಮಾಡದೆ, ಕಿಲುಬು ಹಿಡಿದು ವಿನಾಶದಂಚಿನಲ್ಲಿದೆ. ಇಂಥ ವಾಹನಗಳನ್ನು ಕಾಲಾಕಾಲಕ್ಕೆ ಸ್ಕ್ರಾೃಪ್‌ಗಾಗಿ ವಿಲೇವಾರಿ ನಡೆಸಿದಲ್ಲಿ ಆಯಾ ಇಲಾಖೆಗೆ ಒಂದಷ್ಟು ಲಾಭ ಲಭಿಸುವುದರ ಜತೆಗೆ ಸಿವಿಲ್ ಸ್ಟೇಷನ್ ವಠಾರ ತ್ಯಾಜ್ಯದ ಗುಡಾರವಾಗುವುದನ್ನು ತಪ್ಪಿಸಲು ಸಾಧ್ಯ ಎಂಬುದಾಗಿ ಕೆಲವು ಅಧಿಕಾರಿಗಳು ತಿಳಿಸುತ್ತಾರೆ.

ಶಿಥಿಲಾವಸ್ಥೆಯಲ್ಲಿ ರಸ್ತೆಗಳು

ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳ ಕಚೇರಿ ಕಾರ್ಯಾಚರಿಸುತ್ತಿರುವ ಸಿವಿಲ್ ಸ್ಟೇಷನ್ ರಸ್ತೆಗಳೂ ಶಿಥಿಲಾವಸ್ಥೆಯಲ್ಲಿವೆ. ಡಾಂಬರು ಕಿತ್ತುಹೋಗಿ ವಾಹನ ಸಂಚಾರ ದುಸ್ತರವೆನಿಸಿದೆ. ಸಿವಿಲ್ ಸ್ಟೇಷನ್ ವಠಾರದಲ್ಲಿ ಸ್ವಚ್ಛತಾ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಕಾಟಾಚಾರಕ್ಕಷ್ಟೆ ಸಿವಿಲ್ ಸ್ಟೇಷನ್ ವಠಾರದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲೇ ತ್ಯಾಜ್ಯ ವಿಲೇವಾರಿಗೆ ಇಷ್ಟೊಂದು ನಿರ್ಲಕ್ಷೃ ವಹಿಸಿದಲ್ಲಿ, ನಗರದ ಇನ್ನುಳಿದ ಪ್ರದೇಶ ಊಹಿಸಲೂ ಸಾಧ್ಯವಾಗದ ಪರಿಸ್ಥಿತಿಯಿದೆ.

ಕ್ಯಾಂಟೀನ್ ಸುತ್ತು ತರಗೆಲೆ

ಜಿಲ್ಲಾಧಿಕಾರಿ ಕಚೇರಿಯ ಬಹುತೇಕ ಮಂದಿ ಆಹಾರ ಸೇವನೆಗೆ ಆಶ್ರಯಿಸುತ್ತಿರುವ ಕ್ಯಾಂಟೀನ್ ಸುತ್ತ ತರಗೆಲೆ ತುಂಬಿಕೊಂಡಿದೆ. ಕ್ಯಾಂಟೀನ್ ಕಡೆ ತೆರಳುವ ರಸ್ತೆಯೂ ಡಾಂಬರು ಕಾಣದೆ ಶಿಥಿಲಾವಸ್ಥೆಯಲ್ಲಿದೆ. ನೂರಾರು ಮಂದಿ ಅಧಿಕಾರಿಗಳು, ಸಾರ್ವಜನಿಕರು ಆಹಾರ ಸೇವನೆಗೆ ಆಶ್ರಯಿಸುತ್ತಿರುವ ಈ ಕ್ಯಾಂಟೀನ್ ಸ್ಥಿತಿ ತೀರಾ ಶೋಚನೀಯಾವಸ್ಥೆಯಲ್ಲಿದೆ.

ಸಿವಿಲ್‌ಸ್ಟೇಷನ್ ವಠಾರದ ರಸ್ತೆಗಳ ದುರಸ್ತಿ ಹೊಣೆ ಜಿಲ್ಲಾಡಳಿತಕ್ಕೆ ಸಂಬಂಧಿಸಿದ್ದು, ರಸ್ತೆಗಳ ಶಿಥಿಲಾವಸ್ಥೆಯ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲೂ ಚರ್ಚಿಸಲಾಗುವುದು. ಜಿಪಂ ಹಾಗೂ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಸ್ವಚ್ಛತಾ ಕಾರ್ಯ ಸಕಾಲಿಕವಾಗಿ ನಡೆಸುವ ಬಗ್ಗೆಯೂ ಗಮನಸೆಳೆಯಲಾಗುವುದು. - ಬೇಬಿ ಬಾಲಕೃಷ್ಣನ್, ಅಧ್ಯಕ್ಷ ಕಾಸರಗೋಡು ಜಿಪಂ https://www.vijayavani.net/free-book-distribution-programme https://www.vijayavani.net/book-distribution-and-felicitation-of-academic-achievers

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net