

ಮಡಿಕೇರಿ: ನಿರ್ಲಕ್ಷಿಸಲ್ಪಟ್ಟ ಮತ್ತು ಅಳಿವಿನಂಚಿನ ಸಮುದಾಯಗಳ ರಕ್ಷಣೆ ನಾಗರೀಕ ಸಮಾಜದ ಹೊಣೆಯಾಗಬೇಕು ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಹಾಕತ್ತೂರು ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಬುಧವಾರ ನಡೆದ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗಿನ ಹಲವು ಸಮುದಾಯಗಳು ಇಂದು ಅಳಿವಿನಂಚಿಗೆ ಬಂದು ತಲುಪಿದ್ದು, ಅದರಲ್ಲಿ ಅರಮನೆಪಾಲೆ ಸಮುದಾಯವು ಒಂದು. ಇದು ಕೊಡಗಿನಲ್ಲಿ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಕೊಡಗಿನ ಕೊಡವ ಸಂಸ್ಕೃತಿಯ ಮೂಲ ಬೇರುಗಳನ್ನು ಹೊಂದಿರುವ ಈ ಸಮುದಾಯವನ್ನು ಸರಕಾರ ಇಲ್ಲಿಯವರೆಗೆ ಗುರುತಿಸದೆ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ನಿರ್ಲಕ್ಷ್ಯಕ್ಕೆ ಒಳಗಾಗುವ ಸಮುದಾಯಗಳ ರಕ್ಷಣೆ ನಾಗರೀಕ ಸಮಾಜದ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಕೊಡವ ಭಾಷಿಕ ಸಮುದಾಯಗಳ ಕೂಟ ಎಲ್ಲಾ ರೀತಿಯ ಸಲಹೆ, ಸಹಕಾರ ನೀಡಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸದಾ ಸಿದ್ಧವಿದೆ ಎಂದು ಭರವಸೆ ನೀಡಿದ ಅವರು, ಅರಮನೆಪಾಲೆ ಜನಾಂಗದ ಸಾಂಸ್ಕೃತಿಕ ಆಚರಣೆಗಳು ಅಳಿವಿನಂಚಿಗೆ ತಲುಪಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಒಂದು ಮೂಲ ಸಂಸ್ಕೃತಿಯೇ ಇಲ್ಲದಾಗುವ ಅಪಾಯವಿದೆ. ಇದರ ಪರಿಣಾಮವನ್ನು ಇಡೀ ಪ್ರಜ್ಞಾವಂತ ಸಮಾಜ ಹೊರಬೇಕಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಅರಮನೆಪಾಲೆ ಸಮಾಜದ ಪ್ರಧಾನ ಸಂಘಟಕ ಪಿ.ಕೆ.ಮಂದಣ್ಣ ಮಾತನಾಡಿ, ಕೊಡಗಿನ ಅತೀ ಪುರಾತನ ಅರಮನೆಪಾಲೆ ಜನಾಂಗ ಇಂದು ಅತ್ಯಲ್ಪ ಜನಸಂಖ್ಯೆಯನ್ನು ಹೊಂದಿದ್ದು, ವಿನಾಶದ ಹಾದಿಯಲ್ಲಿದೆ. ಸರ್ಕಾರದ ಲೆಕ್ಕಗಳಲ್ಲಿ ಸಂಖ್ಯೆ ೧೫ ಸಾವಿರ ಎಂದು ಇದೆ. ಜಾತಿಗಳಿಗೆ ಸಂಬಂಧಿಸಿದಂತೆ ಬ್ರಿಟಿಷರ ಅವೈಜ್ಞಾನಿಕ ನೀತಿಗಳನ್ನೇ ಸ್ವತಂತ್ರ ಭಾರತದ ಸರ್ಕಾರಗಳೂ ಅನುಸರಿಸುತ್ತಿವೆ ಎಂದು ಆರೋಪಿಸಿದರು.
ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಅರಮನೆಪಾಲೆ ಸಮುದಾಯಕ್ಕೆ ಕೊಡಗಿನಲ್ಲಿ ಜಾತಿಯಾಗಿ ಮಾನ್ಯತೆಯೇ ಇಲ್ಲದಾಗಿರುವುದು ದೊಡ್ಡ ದುರಂತ. ಕೇವಲ ಓಟು ಬ್ಯಾಂಕ್ ರಾಜಕಾರಣಕ್ಕಾಗಿ ಜನಾಂಗವನ್ನು ಒತ್ತಾಯ ಪೂರ್ವಕವಾಗಿ ಯಾವುದೋ ಜಾತಿಗೆ ಸೇರಿಸಲಾಗುತ್ತಿದೆ. ಕೊಡವ ಸಂಸ್ಕೃತಿ, ಆಚಾರ ವಿಚಾರ, ಪದ್ಧತಿ, ಪರಂಪರೆಯ ಆಚರಣೆಗೆ ಸಮುದಾಯ ಭಯ ಪಡುವಂತಾಗಿದೆ. ಇದು ನಾಗರೀಕ ಸಮಾಜದ ದುಸ್ಥಿತಿ ಮತ್ತು ಸಮುದಾಯದ ದುರ್ವಿಧಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾಜದ ಪ್ರಧಾನ ಸಂಚಾಲಕ ಅರಮನೆಪಾಲೆರ ಜಿ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅರಮನೆಪಾಲೆರ ದೇವಯ್ಯ ಕಕ್ಕಬ್ಬೆ, ಮಾಜಿ ಸೈನಿಕರಾದ ಅರಮನೆಪಾಲೆರ ಸುಭಾಷ್ ಬಾಳುಗೋಡು, ಅರಮನೆಪಾಲೆರ ಶಿವಪ್ಪ ಕಂಡಿಮಕ್ಕಿ, ಅರಮನೆಪಾಲೆ ಸಮಾಜದ ಕಾರ್ಯದರ್ಶಿ ಅರಮನೆಪಾಲೆರ ದೇವಯ್ಯ ಹಾಕತ್ತೂರು, ವಿವಿಧ ಗ್ರಾಮ ಸಮಿತಿ, ಸಮಾಜದ ಕ್ರೀಡಾ ಸಮಿತಿ, ಮರಣ ಧನ ಸಹಾಯ ನಿಧಿ ಸಮಿತಿ, ಕ್ರಿಕೆಟ್ ಪಂದ್ಯಾವಳಿ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
ನಿತ್ಯಾ ಹಾಗೂ ವರ್ಷ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ರಘು ತಂಡದಿಂದ ಪ್ರದರ್ಶಿಸಲ್ಪಟ್ಟ ಹಾಕತ್ತೂರು ಭಾಗದ ಅರಮನೆಪಾಲೆ ಜಾನಪದ ಪುತ್ತರಿ ಆಚರಣೆ ಕೋರಕಳಿ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು. ಡಿಂಪಲ್ ಪೇರೂರು, ಹಾಕತ್ತೂರಿನ ಯಶಸ್ವಿನಿ ಹಾಗೂ ವರ್ಷ ಅವರ ನೃತ್ಯ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.