

ಚನ್ನಗಿರಿ: ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿರುವ ಪೌರಕಾರ್ವಿುಕರ ಸೇವೆ ಕಾಯಂ ಸೇರಿ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ವಿುಕರು ಪುರಸಭೆ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನೆ ನೇತೃತ್ವ ವಹಿಸಿದ್ದ ಪುರಸಭೆ ವ್ಯವಸ್ಥಾಪಕ ವೈ.ಎಸ್.ಆರಾಧ್ಯ ಮಾತನಾಡಿ, ಸರ್ಕಾರ ಪ್ರತಿಭಟನೆಗೆ ಸ್ಪಂದಿಸಬೇಕು, ಸ್ವಚ್ಛಗೊಳಿಸದೆ ಕಸದ ರಾಶಿ ಪಟ್ಟಣದ ಬೀದಿಗಳಲ್ಲಿ ಬಿದ್ದು ಕೆಟ್ಟ ವಾಸನೆಯಿಂದ ನಾರುತ್ತಿದೆ. ಪಟ್ಟಣವನ್ನು ಸ್ವಚ್ಛವಾಗಿಡುವ ಪೌರಕಾರ್ವಿುಕರ ಕೆಲಸವನ್ನು ಮೊದಲು ಮಾಡಿಕೊಡಬೇಕು. ಸಾರ್ವಜನಿಕರು ಕರೆ ಮಾಡಿ ಸ್ವಚ್ಛತೆಗೆ ಆಗ್ರಹಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಬೇಡಿಕೆ ಈಡೇರಿಸುವವರೆಗೆ ಕೆಲಸವನ್ನು ಪ್ರಾರಂಭಿಸುವುದಿಲ್ಲ ಎಂದರು.
ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಧಾರದ ಮೇಲೆ ಕಂಪ್ಯೂಟರ್ ಆಪರೇಟರ್, ವಾಟರ್ವುನ್, ವಾಹನ ಚಾಲಕರು, ಬೀದಿ ನಿರ್ವಹಣಾ ಕಾರ್ವಿುಕರು ಇನ್ನೂ ಅನೇಕ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ವಿುಕರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಿಗೊಳಿಸಿ ನೇರ ಪಾವತಿಯಡಿಯಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಕಂದಾಯ ಅಧಿಕಾರಿ ಮಂಜುನಾಥ್ ಆರೋಗ್ಯ ಅಧಿಕಾರಿ ಶಿವರುದ್ರಪ್ಪ, ಬಾಲಾಜಿರಾವ್, ವಿಶ್ವನಾಥ್, ಪ್ರೇಮಲೀಲಾ, ಕಾಂತರಾಜ್, ಕೆ.ಎಸ್. ಮಂಜುನಾಥ್, ವಿಜಯಕುಮಾರ್, ಅನಿಲ್, ಮದನ್ ಇದ್ದರು.