

ಹೊಳೆನರಸೀಪುರ: ರಾಜ್ಯ ಸರ್ಕಾರ ಪೌರ ಸೇವಾ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಲಿಖಿತರೂಪದಲ್ಲಿ ಸಮ್ಮತಿಯನ್ನು ನೀಡಿರುವುದರಿಂದ, ಪೌರ ಸೇವಾ ನೌಕರರು ಶನಿವಾರ ಮುಷ್ಕರವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಪುರಸಭೆ ರಾಜಸ್ವ ನಿರೀಕ್ಷಕ ಸಿ.ಡಿ.ನಾಗೇಂದ್ರ ಕುಮಾರ್ ತಿಳಿಸಿದರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಮೇ 25ರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಕರ್ತವ್ಯದಿಂದ ದೂರ ಉಳಿದು, ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ನೀರು ಪೂರೈಕೆ, ಒಳ ಚರಂಡಿ ನಿರ್ವಹಣೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿತ್ತು. ಆದರೆ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸಿಕ್ಕಿರುವ ಹಿನ್ನೆಯಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸೂಚನೆಯಂತೆ ಮುಷ್ಕರ ಕೈಬಿಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶನಿವಾರದಿಂದಲೇ ಪುರಸಭೆ ಕಚೇರಿ ಕಾರ್ಯಗಳು ಸೇರಿದಂತೆ, ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ನೀರು ಪೂರೈಕೆ, ಒಳ ಚರಂಡಿ ನಿರ್ವಹಣೆಯನ್ನು ನಡೆಸಲಾಗುತ್ತದೆ. ಸರ್ಕಾರವು ಮುಂದಿನ ದಿನಗಳಲ್ಲಿ ಪೌರ ಸೇವಾ ನೌಕರರ ಹಿತರಕ್ಷಣೆಗೆ ಬದ್ಧವಾಗಿದ್ದು ನಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಲು ಕ್ರಮವಹಿಸಲಿ ಎಂದು ಮನವಿ ಮಾಡಿದರು.
ತಾಲೂಕು ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಕೆ.ಕೆ.ಸುನಿಲ್, ಪುರಸಭೆ ಸಮುದಾಯ ಸಂಘಟನಾಧಿಕಾರಿ ಪಂಕಜಾ, ಸಮುದಾಯ ಸಂಘಟಕರಾದ ರಮೇಶ್, ಶೇಖರ್, ಹುಸೇನ್, ಪುರಸಭೆ ಆರೋಗ್ಯ ನಿರೀಕ್ಷಕ ವಸಂತ್ ಕುಮಾರ್, ಮೋಹನ್, ಹೇಮಂತ್, ವನಿತಾ, ಆಶಾ,ಅನ್ನಪೂರ್ಣ, ಆಶಾ, ವೇದಾ, ಶೇಖರ್,ಮೇಸ್ತ್ರಿಗಳಾದ ಮಾದಯ್ಯ, ಚೆಲುವ, ನಾಗಮ್ಮ,ಕಿರಣ್, ಬೀದಿ ದೀಪ ನಿರ್ವಹಣೆ ಆನಂದ್, ಜವರಪ್ಪ, ಅಬ್ಬಾಸ್, ಸುನಿಲ್, ಭೈರೇಶ್,ವೆಂಕಟೇಶ್, ನಂಜುಡಿ, ಸ್ವಾಮಿ, ಪ್ರಜ್ವಲ್, ಚಂದು, ರಾಮಸ್ವಾಮಿ, ಶಿವಣ್ಣ, ಪ್ರದೀಪ್,ಕಿಶೋರ್, ಮತ್ತು ಇನ್ನಿತರರು ಇದ್ದರು.