ಪೌರಕಾರ್ಮಿಕರು ಆರೋಗ್ಯದತ್ತ ಗಮನಹರಿಸಲಿ

BYD POURAKARMIKARU
Published on

ಬ್ಯಾಡಗಿ: ಸದೃಢ ಆರೋಗ್ಯ ಉಳಿಸಿಕೊಂಡು ಸುಖೀ ಜೀವನ ನಡೆಸಲು ಚಟಗಳಿಂದ ಮುಕ್ತವಾಗಿ ಉತ್ತಮ ಆಹಾರ ಸೇವನೆ ರೂಢಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ತಿಳಿಸಿದರು.

ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಪುರಸಭೆ ಹಾಗೂ ಕೆನರಾ ಬ್ಯಾಂಕ್ ಆಶ್ರಯದಲ್ಲಿ ಪುರಸಭೆ ಕಾರ್ಮಿಕರ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೌರ ಕಾರ್ಮಿಕರು ತಮ್ಮ ಮನೆ ಸೇರಿದಂತೆ ಸುತ್ತಲಿನ ಸ್ವಚ್ಛತೆಯೊಂದಿಗೆ ತಮ್ಮ ಆರೋಗ್ಯದತ್ತ ವಿಶೇಷ ಗಮನಹರಿಸಬೇಕು. ಪೌರಕಾರ್ಮಿಕರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ ಮಾತನಾಡಿ, ಬಹುತೇಕ ಯುವಕ ಯುವತಿಯರು ದುಶ್ವಟಗಳ ದಾಸಕ್ಕೆ ಒಳಗಾದ ಭವಿಷ್ಯವನ್ನು ಕತ್ತಲಾಗಿಸಿಕೊಳ್ಳುವ ಮೂಲಕ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದು, ಗುರು ಹಿರಿಯರ ಮಾತಿಗೆ ಮನ್ನಣೆ ನೀಡದಂತಾಗಿದೆ. ಆರೋಗ್ಯಯುತ ಸಮಾಜ ನಿರ್ಮಿಸಿದಾಗ ಸಂಪೂರ್ಣ ವ್ಯವಸ್ಥೆ ಸುಸೂತ್ರವಾಗಿ ನಡೆಯಲಿದೆ. ಪಾಲಕರು ತಮ್ಮ ಮನೆಗಳಲ್ಲಿ ತಮ್ಮ ಆರೋಗ್ಯದ ಜೊತೆ ಮಕ್ಕಳ ಭವಿಷ್ಯ, ಆರೋಗ್ಯಕ್ಕೂ ವಿಶೇಷ ಒತ್ತು ನೀಡಬೇಕಿದೆ ಎಂದರು.

ಪುರಸಭೆ ವ್ಯವಸ್ಥಾಪಕಿ ನಾಗರತ್ನಾ ಹೊಸಮನಿ, ಪುರಸಭೆ ಸದಸ್ಯ ರಾಮಣ್ಣ ಕೋಡಿಹಳ್ಳಿ, ಆಶ್ರಯ ಸಮಿತಿ ಸದಸ್ಯ ಗಿರೀಶ ಇಂಡಿಮಠ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಗೋಕುಲ ವಿ., ಅಮೂಲ್ಯಾ, ಆರ್ಥಿಕ ಸಲಹೆಗಾರ ಶಂಕರ ಉಪ್ಪಾರ, ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಹನುಮಂತಪ್ಪ, ಸದಾನಂದ ಚಿಕ್ಕಮಠ, ಪುರಸಭೆ ಪರಿಸರ ಇಂಜಿನಿಯರ್ ಚನ್ನಪ್ಪ ಅಂಗಡಿ, ಮಹಾಂತೇಶ ಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net