ಸೇವೆ ಕಾಯಾಮಾತಿಗೆ ಪೌರಕಾರ್ಮಿಕರ ಆಗ್ರಹ

BLY- 1-5
ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Published on

ಬಳ್ಳಾರಿ: ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪೌರ ಕಾರ್ಮಿಕರು, ಕಸದ ವಾಹನ ಚಾಲಕರು, ಒಳ ಚರಂಡಿ ಕಾರ್ಮಿಕರು, ನೀರು ಸರಬರಾಜು ಕಾರ್ಮಿಕರು, ಬೀದಿ ದೀಪ ಕಾರ್ಮಿಕರು, ಮಸಣ ಕಾರ್ಮಿಕರು, ಲೋಡರ್ಸ್ ಮತ್ತು ಕ್ಲಿನರ್ಸ್ ಕಾರ್ಮಿಕರ ಸೇವೆಯನ್ನು ಬೆಳಗಾವಿ ಅಧಿವೇಶನದಲ್ಲಿ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಮಾರ್ಚ್‌ನಲ್ಲಿ ನೀಡಬೇಕಾಗಿರುವ ನೇಮಕಾತಿ ಆದೇಶವನ್ನು ಹಾಲಿ ನಿರ್ವಹಿಸುತ್ತಿರುವ 132 ನೇರ ಪಾವತಿ- ಪೌರ ಕಾರ್ಮಿಕರಿಗೆ ತಕ್ಷಣ ನೇಮಕಾತಿ ಆದೇಶಗಳನ್ನು ನೀಡಬೇಕು. ಹಾಗೆಯೇ ರಾಜ್ಯ ಸರ್ಕಾರದ ಹೊಸ ಆದೇಶದ ಅನ್ವಯ 121 ಕಾರ್ಮಿಕರ ನೇಮಕಾತಿಗೆ ಪ್ರಕ್ರಿಯೆ ಆರಂಭ ಮಾಡಬೇಕು. 2001 ರಿಂದ ಸೇವೆ ಮಾಡುತ್ತಿರುವ ಹಿರಿಯ ಪೌರ ಕಾರ್ಮಿಕರನ್ನು ಪರಿಗಣಿಸಬೇಕು ಬೇರೆ ಜಿಲ್ಲೆಯಲ್ಲಿ ಕಸ ವಾಹನ ಚಾಲಕರನ್ನು ಪೌರ ಕಾರ್ಮಿಕರೆಂದು ನೇಮಕಾತಿ ಆದೇಶ ಮಾಡಲಾಗಿದೆ. ಅದರಂತೆ ಬಳ್ಳಾರಿ ಮಹಾನರ ಪಾಲಿಕೆಯ ಕಸದ ವಾಹನ ಚಾಲಕರನ್ನು ಪರಿಗಣಿಸಬೇಕು. ನಗರದಲ್ಲಿ ವಾಸವಿರುವ 509 ಜನಕ್ಕೆ ಒಬ್ಬ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ನೇರ ಪಾವತಿ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿ ಮರಣ ಹೊಂದಿರುವ ಅವರ ಅವಲಂಬಿತರಿಗೆ ಕೆಲಸವನ್ನು ನೀಡಬೇಕು. ಕೆಲಸದ ಸಮಯ ನಿಗದಿಪಡಿಸಬೇಕು. ಇತ್ತೀಚೆಗೆ ಹೊರಗಿನ 30 ಜನ ಲೋಡರ್ಸ್‌ಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಅವರನ್ನು ವಜಾಗೊಳಿಸಿ ಮರಣ ಹೊಂದಿದ ಕಾರ್ಮಿಕರ ಅವಲಂಬಿತರನ್ನು ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಮಾಡಿರುವ ಸಂಕಷ್ಟ ಭತ್ಯೆಯನ್ನು ಎಲ್ಲಾ ಕಾರ್ಮಿಕರಿಗೂ ಅನ್ವಯವಾಗುವಂತೆ ಕ್ರಮಕೈಗೊಳ್ಳಬೇಕು. ಬಳ್ಳಾರಿ ಪಾಲಿಕೆಯಲ್ಲಿ ನೇರ ಪಾವತಿ ಪೌರ ಕಾರ್ಮಿಕರಿಗೆ ಬಾಕಿ ಇರುವ 12 ತಿಂಗಳ ಸಂಕಷ್ಟ ಭತ್ಯೆಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಬಳ್ಳಾರಿ ಪಾಲಿಕೆಯ ಎಲ್ಲ ಕಾರ್ಮಿಕರಿಗೆ ಕಂಪೋಸ್ಟ್‌ನಲ್ಲಿರುವ 74 ಎಕರೆ ಸರ್ಕಾರಿ ಜಾಗದಲ್ಲಿ 30 * 40 ನಿವೇಶನ ನೀಡಬೇಕು. ನಂತರ ವಸತಿ ಯೋಜನೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಬಳ್ಳಾರಿ ಪಾಲಿಕೆಯ ಕಾರ್ಮಿಕರಿಗೆ ಬೆಳಗ್ಗೆ ಇರುವ ಹಾಜರಿಯನ್ನು 6 ಗಂಟೆಯಿಂದ 6.30 ಕ್ಕೆ ವಿಸ್ತರಣೆ ಮಾಡಬೇಕು. ಕೆಲಸದ ಅವಧಿಯನ್ನು 8 ಗಂಟೆಯವರೆಗೆ ಮಾತ್ರ ನಿಗದಿ ಮಾಡಬೇಕು. ಹೆಚ್ಚಿನ ಅವಧಿ ಕೆಲಸ ಮಾಡಿದಲ್ಲಿ ಅವರಿಗೆ ಹೆಚ್ಚುವರಿ ಭತ್ಯೆ ನೀಡಬೇಕು.
60 ವರ್ಷದ ತುಂಬಿದ ಕಾರ್ಮಿಕರಿಗೆ ಹತ್ತು ಲಕ್ಷ ರೂ.ಪರಿಹಾರ ನೀಡಬೇಕು. ಎಲ್ಲ ಸಫಾಯಿ ಕರ್ಮಚಾರಿಗಳಿಗೆ ಮತ್ತು ಅವಲಂಬಿತರಿಗೆ ಗುರುತಿನ ಚೀಟಿಯನ್ನು ನೀಡಬೇಕು. ಪಾಲಿಕೆಯನ್ನು ಡಿ ದರ್ಜೆಯಿಂದ ಸಿ ದರ್ಜೆಗೆ ಏರಿಸಲು ರಾಜ್ಯ ಸರ್ಕಾರವು ಕ್ರಮಕೈಗೊಳ್ಳಬೇಕು. ಮಹಾನಗರ ಪಾಲಿಕೆಗೆ ಒಂದು ಸಾವಿರ ಜನ ಪೌರ ಕಾರ್ಮಿಕರನ್ನು ಹೊಸದಾಗಿ ನೇಮಿಸಿಕೊಳ್ಳಬೇಕು. ಪೊಲೀಸ್ ಇಲಾಖೆಯ ಮಾದರಿಯಲ್ಲಿ ಪೌರ ಕಾರ್ಮಿಕರು ಮರಣ ಹೊಂದಿದಲ್ಲಿ 50 ಲಕ್ಷ ರೂ. ಪರಿಹಾರವನ್ನು ಇಲಾಖೆಯಿಂದಲೇ ನೀಡಬೇಕು. ಬೇಡಿಕೆ ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಬೆಂಗಳೂರು ಚಲೋ ಆಯೋಜಿಸಲಾಗುವುದು ಎಂದು ಎಚ್ಚರಿಸಿದರು.

ಪೌರಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ರಾಮಚಂದ್ರ, ಕಸದ ವಾಹನ ಚಾಲಕರ ಸಂಘದ ಅಧ್ಯಕ್ಷ ವೈ.ಉಮೇಶ್, ಒಳಚರಂಡಿ ಕಾರ್ಮಿಕರ ಸಂಘದ ಅಧ್ಯಕ್ಷ ಗಂಗಣ್ಣ, ಉಪಾಧ್ಯಕ್ಷ ಎ.ಕಾಳಿಪ್ರಸಾದ್, ಜಿಲ್ಲಾಧ್ಯಕ್ಷೆ ರತ್ನಮ್ಮ ಹಾಗೂ 300ಕ್ಕೂ ಹೆಚ್ಚು ಪೌರಕಾರ್ಮಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net