ನಗರಪಾಲಿಕೆ ಬಜೆಟ್‌ನಲ್ಲಿ ಅನ್ಯಾಯ ಸರಿಪಡಿಸಲು ಪೌರಕಾರ್ಮಿಕರ ಒತ್ತಾಯ

Published on

ಮೈಸೂರು: ಪೌರಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಈ ಬಾರಿಯ ನಗರಪಾಲಿಕೆ ಬಜೆಟ್‌ನಲ್ಲಿ ಸರಿಪಡಿಸಬೇಕು ಎಂದು ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸಮಿತಿ ರಾಜ್ಯ ಸದಸ್ಯ ಡಿ.ಆರ್.ರಾಜು ತಿಳಿಸಿದರು.

ಪಾಲಿಕೆಯ 158 ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿಯಲ್ಲಿ 2017-18ರ ಸಾಲಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಜಯನಗರ ಮಳಲವಾಡಿಯಲ್ಲಿ ಮುಡಾಕ್ಕೆ ಸೇರಿದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಕೆಲ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಯೋಜನೆ ಬದಲಿಸಿ ಕೆಸರೆಯಲ್ಲಿ ನಿರ್ಮಿಸಿಕೊಡುವ ನಿರ್ಧಾರಕ್ಕೆ ಬರಲಾಯಿತು. ಆದರೂ ಅಧಿಕಾರಿಗಳು ಇದುವರೆಗೂ ಮನೆ ನಿರ್ಮಿಸಿಕೊಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಪ್ರತಿಯೊಬ್ಬ ಫಲಾನುಭವಿ ಮೂರು ಲಕ್ಷ ರೂ. ವಂತಿಗೆ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಪಾಲಿಕೆಯಲ್ಲಿ ಶೇ.24ರಷ್ಟು ಅನುದಾನವನ್ನು ಪೂರ್ಣವಾಗಿ ಖರ್ಚು ಮಾಡಿಲ್ಲ. ಈ ರೀತಿ ಸುಮಾರು ಆರು ಕೋಟಿ ರೂ. ಬಾಕಿ ಉಳಿದಿದೆ. ಅದನ್ನು ಅಲ್ಲಿಗೆ ಬಳಸಿಕೊಳ್ಳಬಹುದು ಎಂದರು.

ಕೂಡಲೇ ಮನೆ ನಿರ್ಮಿಸಿಕೊಡಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಂತೆ ಕೋರಲಾಗಿದೆ. ಇಲ್ಲದಿದ್ದಲ್ಲಿ ಬಜೆಟ್ ಸಭೆ ಬಹಿಷ್ಕರಿಸಿ ಪಾಲಿಕೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು. ಪೌರಕಾರ್ಮಿಕ ಸಂಘಟನೆಗಳ ಮುಖಂಡರಾದ ಮಂಚಯ್ಯ, ಕುಮಾರಸ್ವಾಮಿ, ವಸಂತಕುಮಾರಿ, ಪವಿತ್ರಾ, ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net