

ಮೈಸೂರು: ಮೈಸೂರನ್ನು ಸ್ವಚ್ಛ ನಗರಿಯಾಗಿ ರೂಪಿಸಲು ಪೌರ ಕಾರ್ಮಿಕರು ನೀಡಿದ ಕೊಡುಗೆ ಅಪೂರ್ವವಾಗಿದ್ದು, ಅವರ ಕೊಡುಗೆಯಿಂದಲೇ ಮೈಸೂರು ಸುಂದರವಾಗಿ ಕಾಣುತ್ತಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ನಗರಪಾಲಿಕೆ ವತಿಯಿಂದ ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೆ ಪ್ರತಿನಿತ್ಯ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ. ಮೈಸೂರಿಗೆ ್ಕ ಸ್ವಚ್ಛ ನಗರಿ ಪ್ರಶಸ್ತಿ ಬರಲು ಪೌರ ಕಾರ್ಮಿಕರ ಪರಿಶ್ರಮ ಕಾರಣ ಎಂದರು.
ನಗರಕ್ಕೆ ಆಗಮಿಸುವ ಪ್ರವಾಸಿಗರು ಅರಮನೆ ಸುತ್ತಮುತ್ತಲಿನ ರಸ್ತೆಗಳು ಶುಚಿಯಾಗಿ, ಅಂದವಾಗಿ ಇರುವುದನ್ನು ಕಂಡು ಖುಷಿಯಾಗುತ್ತಾರೆ. ಈ ರೀತಿ ಪ್ರತಿಯೊಂದು ರಸ್ತೆ, ವಾರ್ಡ್‌ಗಳು ಸುಂದರವಾಗಲು ಪೌರ ಕಾರ್ಮಿಕರೇ ಕಾರಣ. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಪೌರ ಕಾರ್ಮಿಕರ ಪಾದಪೂಜೆ ಮಾಡಿ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದರು ಎಂದು ಹೇಳಿದರು.
ಪೌರ ಕಾರ್ಮಿಕರ ಜೀವನ ಬಹಳ ಕಷ್ಟಮಯವಾಗಿದ್ದು, ಪೌರಕಾರ್ಮಿಕರ ಕುಟುಂಬ ಚಿತ್ರಣ ಬದಲಾಗಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಅವಶ್ಯಕತೆ ಇದೆ. ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ಮೀಸಲಿಟ್ಟಿರುವ ಅನುದಾನವನ್ನು ಬಳಕೆ ಮಾಡಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪ, ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್, ನಗರಪಾಲಿಕೆ ಸದಸ್ಯರಾದ ಸವಿತಾ ರಮೇಶ್, ಭಾಗ್ಯ, ವೇದಾವತಿ, ಪ್ರಮೀಳಾ, ಶಾಂತಮ್ಮ, ಆರೋಗ್ಯಾಧಿಕಾರಿ ವೆಂಕಟೇಶ್, ಹೆಚ್ಚುವರಿ ಆಯುಕ್ತ ಜೆ.ಎಸ್.ಸೋಮಶೇಖರ್ ಹಾಗೂ ಇತರರು ಇದ್ದರು.