

ಸೋಮವಾರಪೇಟೆ: ಪೌರಕಾರ್ಮಿಕರೆಂದರೆ ದೇವರಿಗೆ ಸಮಾನ. ಅವರ ಅರೋಗ್ಯ, ಭದ್ರತೆಯ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಪಟ್ಟಣ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಹಾಸಿಗೆಯಿಂದ ಎದ್ದೇಳುವ ಮೊದಲೇ ನಗರ, ಪಟ್ಟಣವನ್ನು ಸ್ವಚ್ಛಗೊಳಿಸಿ, ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತಾರೆ. ಆ ಋಣವನ್ನು ನಾವು ತೀರಿಸಲೇಬೇಕಾಗಿದೆ. ಪೌರಕಾರ್ಮಿಕರು ಕೂಡ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೈಗವಸು ಧರಿಸದೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಬಾರದು. ಪಂಚಾಯಿತಿಯಿಂದ ಪೌರಕಾರ್ಮಿಕರ ಮನೆಗಳಿಗೆ ಆರೋಗ್ಯದ ಕಿಟ್ ವಿತರಿಸಬೇಕು ಎಂದು ಹೇಳಿದರು.
ಪೌರಕಾರ್ಮಿಕರು ಕರ್ತವ್ಯದಲ್ಲಿ ಇದ್ದಾಗಲೇ ಉಚಿತ ನಿವೇಶನಗಳನ್ನು ಕೊಟ್ಟರೆ, ಸಾಲ ಮಾಡಿಯಾದರೂ ಮನೆ ಕಟ್ಟಿಕೊಳ್ಳುತ್ತಾರೆ. ನಿವೃತ್ತಿಯಾದ ನಂತರ ನಿವೇಶನ ಕೊಟ್ಟರೆ, ಮನೆ ನಿರ್ಮಿಸಿಕೊಳ್ಳಲು ಸಮಸ್ಯೆಯಾಗುತ್ತದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ 23 ಪೌರಕಾರ್ಮಿಕರಿಗೆ ನಿವೇಶನ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಕಾಯಂಗೊಳಿಸುವ ಬೇಡಿಕೆಗೆ ನನ್ನ ಬೆಂಬಲವಿದ್ದು, ನನ್ನ ವ್ಯಾಪ್ತಿಯೊಳಗೆ ಸರ್ಕಾರದೊಂದಿಗೆ ವ್ಯವಹರಿಸುತ್ತೇನೆ ಎಂದು ಹೇಳಿದರು.
ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಆಯೋಜಿಸಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಂಚಾಯಿತಿ ಆಡಳಿತಾಧಿಕಾರಿ ಎಸ್.ಎನ್.ನರಗುಂದ, ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಜಾಸಿನ್ ಖಾನ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್, ಪಂಚಾಯಿತಿ ಸದಸ್ಯ ಪಿ.ಕೆ.ಚಂದ್ರು, ಶೀಲಾ ಡಿಸೋಜಾ, ಜಯಂತಿ ಶಿವಕುಮಾರ್, ಮೃತ್ಯಂಜಯ, ಮೋಹಿನಿ, ಬಿ.ಆರ್.ಮಹೇಶ್, ಜೀವನ್ ಇದ್ದರು. ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪಂಚಾಯಿತಿ ಅಭಿವೃದ್ಧಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದ ನಾಮನಿರ್ದೇಶಿತ ಸದಸ್ಯ ಎಸ್.ಮಹೇಶ್ ಅವರನ್ನು ಪಂಚಾಯಿತಿ ವತಿಯಿಂದ ಅಭಿನಂದಿಸಲಾಯಿತು.