

ಹನುಮಸಾಗರ: ಮಕ್ಕಳದು ಕಲಿಯುವ ವಯಸ್ಸು. ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಉನ್ನತ ಹುದ್ದೆ ಅಲಂಕರಿಸಬಹುದು ಎಂದು ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.
ಜಹಗೀರ ಗುಡದೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಹಾಗೂ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ:
ಶಿಕ್ಷಣ ಪಡೆದವರು ತಮ್ಮ ಬದುಕನ್ನು ಉಜ್ವಲಗೊಳಿಸುವ ಜತೆಗೆ ಇತರರ ಬದುಕನ್ನೂ ಗಟ್ಟಿಗೊಳಿಸುವಂತಹ ಮಾದರಿ ವ್ಯಕ್ತಿಯಾಗಬಹುದು. ವಿದ್ಯಾರ್ಥಿಗಳು ಕಾನೂನನ್ನು ಸರಿಯಾಗಿ ತಿಳಿದುಕೊಂಡು ನಿಮ್ಮ ಕುಟುಂಬದ ಸದಸ್ಯರು ಹಾಗೂ ನಿಮ್ಮ ಸುತ್ತಮುತ್ತಲಿನವರಿಗೆ ತಿಳಿಸಬೇಕು. ಕಾನೂನು ಪಾಲನೆ ಮಾಡುವಂತೆ ಇತರರಿಗೆ ತಿಳಿಸಬೇಕು. ಓದುವ ಸಮಯದಲ್ಲಿ ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.
ಪಿಎಸ್‌ಐ ವಿರೂಪಾಕ್ಷಿ ಶೆಟ್ಟರ ಮಾತನಾಡಿ, ನಿಮ್ಮ ಸುತ್ತಮುತ್ತ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಪೊಲೀಸ್ ಠಾಣೆಗೆ ಮಕ್ಕಳು ಮಾಹಿತಿ ನೀಡಬೇಕು. ಸಂವಿಧಾನದಲ್ಲಿ ಇರುವ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ತಿಳಿದುಕೊಂಡು ಅದರ ಅಡಿಯಲ್ಲಿ ಸಾಗಬೇಕು ಎಂದರು. ನ್ಯಾಯವಾದಿ ಪಿ.ಎನ್.ಸೂಡಿ, ಮುಖ್ಯ ಶಿಕ್ಷಕ ಸತ್ಯಪ್ಪ ಯಲಬುರ್ಗಿ, ಶಿಕ್ಷಕರಾದ ಶಿವಪ್ಪ ಇಲಾಳ, ತನುಜಾ ಪೊಲೀಸ್, ಬಸಪ್ಪ ಹಿರೇಮನಿ, ಶರಣಪ್ಪ ರಾಮಪುರ, ಗುರುರಾಜ ಎಲ್ ಇತರರಿದ್ದರು.