

ಹನುಮಸಾಗರ: ಪ್ರತಿಯೊಬ್ಬರು ಕಾನೂನನ್ನು ಸರಿಯಾಗಿ ತಿಳಿದುಕೊಳಬೇಕು ಎಂದು ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.
ಸಮೀಪದ ಅಡವಿಭಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಹಾಗೂ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಸಂವಿಧಾನವನ್ನು ಸರಿಯಾಗಿ ಓದಿಕೊಳ್ಳಬೇಕು. ನಂತರ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು, ನೆರೆ-ಹೊರೆಯವರಿಗೆ ಕಾನೂನಿನ ಅರಿವು ಮೂಡಿಸಬೇಕು. ಸಂವಿಧಾನದಲ್ಲಿ ಮಕ್ಕಳಿಗಾಗಿ ವಿಶೇಷ ಹಕ್ಕುಗಳನ್ನು ನೀಡಲಾಗಿದ್ದು, ಅವುಗಳನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವಕೀಲರಾದ ಬಿ.ವೈ.ಭಜಂತ್ರಿ, ಬಸವರಾಜ್ ಭಜಂತ್ರಿ, ಸಿಆರ್‌ಪಿ ಅಯ್ಯಪ್ಪ ಸುರಳ ಮಾತನಾಡಿದರು. ಮುಖ್ಯಶಿಕ್ಷಕ ರಾಜಕುಮಾರ ನಾಯ್ಕ, ಗ್ರಾಪಂ ಉಪಾಧ್ಯಕ್ಷ ಶರಣಗೌಡ ಮ್ಯಾಗೇರಿ, ಸದಸ್ಯ ಗವಿಸಿದ್ದಪ್ಪ ಕುದರಿ ಹಾಗೂ ಶಿಕ್ಷಕರಿದ್ದರು.