ಶಾಸನಬದ್ಧ ಮಂಡಳಿಯ ಹಿಡಿತವಿಲ್ಲದ ಸಿವಿಲ್ ಇಂಜಿನಿಯರಿಂಗ್: ರಾಜ್ಯದಲ್ಲಿ ಕಾಯ್ದೆ ಜಾರಿಗೊಳಿಸಲು ಒತ್ತಾಯ

Civil Engineer Association press conference mandya
Published on

ಮಂಡ್ಯ: ರಾಜ್ಯದಲ್ಲಿರುವ ಸುಮಾರು ಐದು ಲಕ್ಷ ಸಿವಿಲ್ ಇಂಜಿನಿಯರ್‌ಗಳ ಅನುಕೂಲಕ್ಕಾಗಿ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಕಾಯ್ದೆ ಜಾರಿಗೊಳಿಸುವಂತೆ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಿವಿಲ್ ಇಂಜಿನಿಯರ್‌ಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ನವೀನ್ ತಿಳಿಸಿದರು.

ದೇಶದ ಪ್ರಗತಿಯಲ್ಲಿ ವಿಶೇಷವಾಗಿ ಆರ್ಥಿಕತೆ, ಸುರಕ್ಷತೆ ಮತ್ತು ಸುಸ್ಥಿರತೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ವೃತ್ತಿಯ ಕೊಡುಗೆ ಅಪಾರ. ವಸತಿ, ಕೈಗಾರಿಕೆ, ಹೆದ್ದಾರಿ, ನೈರ್ಮಲೀಕರಣ, ಜಲಸಂಪನ್ಮೂಲ, ರೈಲ್ವೆ, ಬಂದರು ಸೇರಿದಂತೆ ಹಲವು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಸ್ತುತ ಸಿವಿಲ್ ಇಂಜಿನಿಯರಿಂಗ್ ವೃತ್ತಿಯೊಂದನ್ನು ಹೊರತುಪಡಿಸಿ ಉಳಿದೆಲ್ಲ ವೃತ್ತಿಗಳನ್ನು ಅಂದರೆ ವಕೀಲ, ವೈದ್ಯಕೀಯ, ಆಯುರ್ವೇದ, ದಂತ ವೈದ್ಯಕೀಯ, ಆರ್ಕಿಟೆಕ್ಟರ್, ಲೆಕ್ಕ ಪರಿಶೋಧಕ ಮುಂತಾದವುಗಳನ್ನು ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟು ಶಾಸನಬದ್ಧ ಮಂಡಳಿಗಳಿಂದ ನಿಯಂತ್ರಿಸಲ್ಪಡುತ್ತವೆ. ಆದರೆ ಶಾಸನಬದ್ದ ಮಂಡಳಿ ಸಿವಿಲ್ ಇಂಜಿನಿಯರಿಂಗ್ ವೃತ್ತಿಗೆ ಇಲ್ಲದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ಪರಿಸ್ಥಿತಿಯಿಂದಾಗಿ ಸಿವಿಲ್ ಇಂಜಿನಿಯರಿಂಗ್ ವೃತ್ತಿಯ ಉದ್ಯಮವು ಸೂಕ್ತ ಅರ್ಹತೆ ಹೊಂದಿಲ್ಲದ ವ್ಯಕ್ತಿಗಳಿಂದ ತುಂಬಿಕೊಂಡಿದೆ. ಸಮಾಜದಲ್ಲಿ ಮೂಲ ಸೌಕರ್ಯ ಕಳಪೆ ಮಟ್ಟದ್ದಾಗಿ ನಲುಗುತ್ತಿವೆ. ಇದರಿಂದಾಗಿ ಕೆಳ ಮತ್ತು ಮಧ್ಯಮ ವರ್ಗದ, ಜನ ಸಂಕಷ್ಟವನ್ನು ಅನುಭವಿಸಬೇಕಾಗಿದೆ. ಹಲವಾರು ಅವ್ಯವಸ್ಥೆಯಿಂದ ಸಿವಿಲ್ ಇಂಜಿನಿಯರ್‌ಗಳ ವೃತ್ತಿಗೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ವೃತ್ತಿಪರ ಇಂಜಿನಿಯರ್‌ಗಳಿಗೆ ತರಬೇತಿ ಅಗತ್ಯವಿದೆ. ತಮ್ಮ ಕಾರ್ಯದಲ್ಲಿ ಬದ್ಧತೆಯನ್ನು ಸ್ಥಾಪಿಸಲು ಒಂದೇ ಸೂರಿನಡಿ ಸಿವಿಲ್ ಇಂಜಿನಿಯರ್‌ಗಳನ್ನು ತಂದು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ನೆರವು ನೀಡಲಾಗುವುದು. ಸಂಘಟನೆಯ ದೃಷ್ಟಿಯಿಂದ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳು ಕೌನ್ಸಿಲ್‌ನ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ತಮ್ಮ ದೇಶಗಳಲ್ಲಿನ ವೃತ್ತಿಗಳನ್ನು ಅವರದೇ ಆದ ರೀತಿ ಕಾನೂನಾತ್ಮಕ ಕಾಯ್ದೆಗಳಡಿ ತಂದಿವೆ. ಆದರೆ ಸಿವಿಲ್ ಇಂಜಿನಿಯರಿಂಗ್ ವೃತ್ತಿಯನ್ನು ಕಾನೂನಾತ್ಮಕವಾಗಿ ಪರಿಚಯಿಸುವ ವ್ಯವಸ್ಥೆ ಬಂದಿಲ್ಲ. ಕರ್ನಾಟಕದ ಸುಮಾರು ಐದು ಲಕ್ಷ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಈ ಕಾಯ್ದೆಯನ್ನು ಆದಷ್ಟು ಬೇಗನೆ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಸಂಘದ ಖಜಾಂಚಿ ಜೆ.ಆರ್.ಮಯೂರ್, ಪದಾಧಿಕಾರಿಗಳಾದ ಪರೀಕ್ಷಿತ್, ರಾಘವ್, ಕಿರಣಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net