

ಮಂಡ್ಯ: ಜಿಲ್ಲಾ ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಮತ್ತು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ.ಮೀರಾ ಶಿವಲಿಂಗಯ್ಯ ಅವರಿಗೆ ಜೂ.22ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಾಗರಿಕ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ಕೆ.ಎಸ್.ರಾಜಣ್ಣ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದವರಾಗಿದ್ದು, ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಜಿಲ್ಲೆಗೆ ಸಂದ ಗೌರವ. 11 ತಿಂಗಳ ಮಗುವಾಗಿದ್ದಾಗಲೇ ಪೋಲಿಯೋ ಪೀಡಿತರಾಗಿದರು. ಆದರೂ ಛಲ ಬಿಡದೆ ಸಾಧನೆ ಮಾಡಿದ್ದಾರೆ. ಅಂಗವಿಕಲರಿಗಾಗಿ ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಇನ್ನು ಮೀರಾ ಶಿವಲಿಂಗಯ್ಯ ಅವರು ಕೆನಡಾದಲ್ಲಿ ಕಂಪ್ಯೂಟರ್ ಕಲಿತು ಅಲ್ಲಿಂದ ಮಂಡ್ಯಕ್ಕೆ ಕಂಪ್ಯೂಟರ್ ತಂದು ಹಲವಾರು ಜನರಿಗೆ ಪ್ರಯೋಜನವಾಗುವ ರೀತಿ ಕೆಲಸ ಮಾಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಮಧ್ಯಾಹ್ನ 2.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ .ನಾಡೋಜ ವುಡೇ ಪಿ.ಕೃಷ್ಣ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ್ ಅಭಿನಂದಿತರನ್ನು ಗೌರವಿಸಲಿದ್ದಾರೆ ಎಂದು ವಿವರಿಸಿದರು.
ಸಮಿತಿಯ ಉಪಾಧ್ಯಕ್ಷೆ ಸುಜಾತಾಕೃಷ್ಣ, ಮಾಧ್ಯಮ ಕಾರ್ಯದರ್ಶಿ ಡಿ.ದೇವರಾಜ ಕೊಪ್ಪ, ಕಾರಸವಾಡಿ ಮಹದೇವು, ಕೀಲಾರ ಕೃಷ್ಣೇಗೌಡ, ಎಂ.ಆರ್.ಮಂಜು, ಎಚ್.ಎಸ್.ಮಲ್ಲೇಶ್ ಉಪಸ್ಥಿತರಿದ್ದರು.