

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನೇರಪಾವತಿ, ಹೊರ ಗುತ್ತಿಗೆ ಪೌರ ಕಾರ್ವಿುಕರು, ಒಳಚರಂಡಿ ಸ್ವಚ್ಛತೆ ಕಾರ್ವಿುಕರು, ಲೋಡರ್ಸ್, ಕ್ಲೀನರ್ಸ್, ವಾಹನ ಚಾಲಕರು ಮತ್ತು ಸಹಾಯಕರನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ಡಿಸೆಂಬರ್ 1ರಂದು ಬೆಳಗ್ಗೆ 11 ಗಂಟೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಎಸ್ಸಿ ಎಸ್ಟಿ ಪೌರ ಕಾರ್ವಿುಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಯಲಿದೆ. ಸಿದ್ದರಾಮಯ್ಯ ಅವರು 2018ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಗುತ್ತಿಗೆ ಪೌರ ಕಾರ್ವಿುಕರು ಹಾಗೂ ಇತರೇ ಸ್ವಚ್ಛತಾ ಕಾರ್ವಿುಕರನ್ನು ಕಾಯಂ ಮಾಡಲು ನಿರ್ಧರಿಸಿದ್ದರು. ಈ ಬಾರಿ ಅಧಿಕಾರಕ್ಕೆ ಬಂದರೆ ಪೌರ ಕಾರ್ವಿುಕರೆಲ್ಲರನ್ನೂ 3 ತಿಂಗಳಲ್ಲಿ ಕಾಯಂ ಮಾಡುವುದಾಗಿ ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ, 6 ತಿಂಗಳಾದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಗುತ್ತಿಗೆ ಪೌರ ಕಾರ್ವಿುಕರು ಹಾಗೂ ಇತರೇ ಸ್ವಚ್ಛತಾ ಕಾರ್ವಿುಕರನ್ನು ಕಾಯಂ ಮಾಡುವ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಈ ಕುರಿತು ಸರ್ಕಾರದ ಗಮನ ಸೆಳೆಯಲು ಡಿ. 1ರಂದೇ ಮುಂದಿನ ಹೋರಾಟದ ಸ್ವರೂಪವನ್ನು ನಿರ್ಧರಿಸುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗಾಳೆಪ್ಪ ದ್ವಾಸಲಕೇರಿ, ಸೋಮು ಮೊರಬದ, ರಾಜು ನಾಗರಾಳ, ಕಮಲವ್ವ ಕಲಕಣ್ಣವರ, ಲಕ್ಷ್ಮೀ ಬೇತಾಪಲ್ಲಿ ಇದ್ದರು.