ಪೌರಕಾರ್ಮಿಕರಿಗಿಲ್ಲ ಜೀವನ ಭದ್ರತೆ

paura new
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕೊಲ್ಲೂರು

ಕಳೆದ ಇಪ್ಪತ್ತು ವರ್ಷದಿಂದ ಕೊಲ್ಲೂರು ಗ್ರಾಮ ಪಂಚಾಯಿತಿ ಸ್ವಚ್ಛತಾ ಕಾರ್ಮಿಕರ ಕೆಲಸ ಕಾಯಂ ಮಾಡಿ, ಸಿಗಬೇಕಾದ ಸೌಲಭ್ಯ ನೀಡುವ ಬದಲು ಕಾರ್ಮಿಕರನ್ನು ಎಸ್‌ಎಲ್‌ಆರ್‌ಎಂ ಘಟಕಕ್ಕೆ ಎತ್ತಂಗಡಿ ಮಾಡಿದೆ. ಘಟಕದಲ್ಲಿ ಕೆಲಸ ಮಾಡುವ 7 ಜನ ಸ್ವಚ್ಛತಾ ಕರ್ಮಿಗಳಿಗೆ ತಿಂಗಳಿಗೆ 9 ಸಾವಿರ ರೂ. ವೇತನ ಬಿಟ್ಟರೆ ಮತ್ತೇನೂ ಸವಲತ್ತು ಇಲ್ಲ. ಪೌರಕಾರ್ಮಿಕರ ಆರೋಗ್ಯ ತಪಾಸಣೆ, ಸಮವಸ್ತ್ರ, ಶೂ, ಗ್ಲೌಸ್, ಮಾಸ್ಕ್ ಯಾವುದೂ ಇಲ್ಲದೆ ಕಸದ ರಾಶಿಯಲ್ಲಿ ಕೂತು ತಮ್ಮ ಭವಿಷ್ಯ ನೆನೆದು ಕಣ್ಣೀರುಡುವಂತಾಗಿದೆ.

ಕೊಲ್ಲೂರು ಪೇಟೆಯಲ್ಲಿ ಬೆಳಗ್ಗೆ, ಸಾಯಂಕಾಲ ಸೇರಿ ದಿನಕ್ಕೆ ಮೂರು ಲೋಡ್ ತ್ಯಾಜ್ಯ ಸಂಗ್ರಹವಾಗುತ್ತದೆ. ಪೇಟೆ ಸ್ವಚ್ಛ ಮಾಡಿದ ಪೌರ ಕಾರ್ಮಿಕರೇ ಕಸ ವಿಂಗಡಣೆ ಮಾಡುತ್ತಿದ್ದು, ಮಧ್ಯಾಹ್ನದ ಊಟ ಘಟಕ ನೀಡುತ್ತದೆ ಎನ್ನುವುದೊಂದೇ ಸಮಾಧಾನ. ತ್ಯಾಜ್ಯದಲ್ಲಿ ಹೆಚ್ಚಿನ ಭಾಗ ನೀರಿನ ಬಾಟಲಿ, ಪ್ಲಾಸ್ಟಿಕ್ ವಸ್ತುಗಳೇ ತುಂಬಿವೆ. ದೇವಸ್ಥಾನಕ್ಕೆ ಬರುವ ಭಕ್ತರು ತ್ಯಾಜ್ಯ ಉಳಿಸಿ ಹೋಗುತ್ತಾರೆ.

ಕೊಲ್ಲೂರಿನ ಪೌರ ಕಾರ್ಮಿಕರು ಮೂಲನಿವಾಸಿ ಕೊರಗ ಸಮುದಾಯಕ್ಕೆ ಸೇರಿದವರು. ಅವರ ಕೆಲಸ ಕಾಯಂಗೊಳಿಸಿ ಅವರಿಗೆ ಸಿಗಬೇಕಾದ ಸೌಲಭ್ಯ ಕೊಡಬೇಕು. ಎಲ್ಲ ಮುನ್ನೆಚ್ಚರಿಕೆ ಅಳವಡಿಸಿಕೊಂಡು ಕೆಲಸ ಮಾಡಿಸಬೇಕು. ನಿವೇಶನ, ಮನೆ ನೀಡುವ ಮೂಲಕ ಮೂಲನಿವಾಸಿಗಳ ಬದುಕಿಗೆ ದಾರಿ ಮಾಡಿಕೊಡಬೇಕು. ಇಲ್ಲದಿದ್ದರೆ ಪೌರ ಕಾರ್ಮಿಕರ ಸೇರಿಸಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಕೂರುತ್ತೇವೆ ಎಂದು ಜಿಲ್ಲಾ ಪೌರ ಕಾರ್ಮಿಕ ಸಂಘ ಅಧ್ಯಕ್ಷ ನಾಗರಾಜ್ ಎಚ್ಚರಿಸಿದ್ದಾರೆ.

ಇಪ್ಪತ್ತು ವರ್ಷದಿಂದ ಕೊಲ್ಲೂರು ಪಂಚಾಯಿತಿ ಸ್ವಚ್ಛತಾ ಕರ್ಮಿಯಾಗಿ ಕೆಲಸ ಮಾಡಿಕೊಂಡಿದ್ದು, ಎಸ್‌ಎಲ್‌ಆರ್‌ಎಂ ಘಟಕ ಆರಂಭವಾದ ನಂತರ ಅಲ್ಲಿಗೆ ವರ್ಗಾಯಿಸಲಾಗಿದೆ. ಈಗ ಘಟಕದಿಂದ ವೇತನ ಪಾವತಿಸುತ್ತಾರೆ. 20 ವರ್ಷ ಗ್ರಾಪಂನಲ್ಲಿ ಪೌರ ಕಾರ್ಮಿಕನಾಗಿ ದುಡಿದರೂ ಕೆಲಸವನ್ನು ಕಾಯಂಗೊಳಿಸಿಲ್ಲ. ಪಂಚಾಯಿತಿ ಆಡಳಿತ ಕಾಯಂ ಕೆಲಸಗಾರ ಎಂದು ಪರಿಗಣಿಸಿ ಪೌರ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯ ನೀಡಬೇಕು.

ನಾಗರಾಜ, ಪೌರ ಕಾರ್ಮಿಕ, ಎಸ್‌ಎಲ್‌ಆರ್‌ಎಂ ಘಟಕ, ಕೊಲ್ಲೂರು

ಹಿಂದೊಮ್ಮೆ ವಿಜಯವಾಣಿಯಲ್ಲಿ ನಿವೇಶನ, ಮನೆ ಇಲ್ಲದ ಬಗ್ಗೆ ವರದಿ ಬಂದ ನಂತರ ಅಧಿಕಾರಿಗಳು ಬಂದು ಜಾಗದ ಸರ್ವೇ ಮಾಡಿ, ಮನೆಕಟ್ಟಿಕೊಳ್ಳಲು ಎರಡುವರೆ ಸೆಂಟ್ಸ್ ಜಾಗ ಕೊಡುತ್ತೇವೆ ಎಂದಿದ್ದರೂ ಇದುವರೆಗೆ ನೀಡಿಲ್ಲ. ಮನೆಯೂ ಆಗಿಲ್ಲ. ಉಳಿದುಕೊಳ್ಳಲು ಜಾಗವಿಲ್ಲದೆ ಅಕ್ಕನ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ತಕ್ಷಣ ನಿವೇಶನ ಕೊಟ್ಟು ಮನೆ ಮಂಜೂರು ಮಾಡಬೇಕು.

ಗೌರಿ, ಪೌರ ಕಾರ್ಮಿಕೆ, ಎಸ್‌ಎಲ್‌ಆರ್‌ಎಂ ಘಟಕ, ಕೊಲ್ಲೂರು

ನಿವೇಶನ ರಹಿತರಾದ ಗೌರಿ, ಮಂಜುನಾಥ, ಕುಸುಮಾಗೆ ಬೈಂದೂರು ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ, ನಿವೇಶನ ಮಂಜೂರು ಮಾಡಿದ್ದಾರೆ. ಬೈಂದೂರು ತಹಸೀಲ್ದಾರ್ ಕಚೇರಿಯಿಂದ ಬಂದು ಡಿಸಿ ಸಹಿ ಮಾಡಿದರೆ ನಿವೇಶನ ಕ್ಲಿಯರ್ ಆಗುತ್ತದೆ. ತ್ವರಿತ ಗತಿಯಲ್ಲಿ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು.

ವಿಶ್ವನಾಥ ಶೆಟ್ಟಿ, ಅಧಿಕಾರಿ, ಐಟಿಡಿಪಿ ಉಡುಪಿ

ವೇತನ ನಿಲ್ಲಿಸಿದ ಕೊಲ್ಲೂರು ದೇವಳ

ಕರೊನಾ ಲಾಕ್‌ಡೌನ್ ಸಮಯದಲ್ಲಿ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಕೆಲಸ ಮಾಡುವ ಏಳು ಜನ ಕಾರ್ಮಿಕರಿಗೆ ಸಂಬಳವನ್ನೇ ಕೊಟ್ಟಿಲ್ಲ. ಘಟಕದಲ್ಲಿ ಕೆಲಸ ಮಾಡುವ ಇಬ್ಬರಿಗೆ ಕೊಲ್ಲೂರು ದೇವಸ್ಥಾನ ವತಿಯಿಂದ ಸಂಬಳ ನೀಡುತ್ತಿದ್ದು, ಆಡಿಟ್ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದೆ. ಈಗ ಏಳು ಜನಕ್ಕೆ ಎಸ್‌ಎಲ್‌ಆರ್‌ಎಂ ಘಟಕದಿಂದ ತಿಂಗಳ ಸಂಬಳ ನೀಡಲಾಗುತ್ತದೆ. ‘ತ್ಯಾಜ್ಯದಲ್ಲಿ ಕೊಲ್ಲೂರು ದೇವಸ್ಥಾನದ್ದೇ ಸಿಂಹಪಾಲು. ಪೌರ ಕಾರ್ಮಿಕರಿಗೆ ದೇವಸ್ಥಾನ ಸಂಬಳ ನೀಡುವುದು ನಿಲ್ಲಿಸಿರುವುದು ಸರಿಯಲ್ಲ’ ಎನ್ನುವುದು ಸ್ಥಳೀಯರ ವಾದ. ಲಾಕ್‌ಡೌನ್ ಆದಾಗ ದೇವಸ್ಥಾನದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಯಕ್ಷಗಾನ ಕಲಾವಿದರಿಗೆ ಕಿಟ್ ಕೊಟ್ಟು ಸಹಕರಿಸಿದ್ದರೂ ಸ್ಥಳೀಯ ಪೌರ ಕಾರ್ಮಿಕರಿಗೆ ನೆರವಿಗೆ ಬಂದಿಲ್ಲ ಎಂದು ಪೌರಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net