

ಮೂಡಿಗೆರೆ: ಪಟ್ಟಣವನ್ನು ಸ್ವಚ್ಛವಾಗಿ ಸುಂದರವಾಗಿ ರೂಪಿಸುವವರು ಪೌರಕಾರ್ಮಿಕರು. ಇವರು ಒಂದು ದಿನ ರಜಾ ಹಾಕಿದರೂ ಪಟ್ಟಣ ಶುಚಿತ್ವದಿಂದ ಕೂಡಿರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ಸಮಾಜದ ನಿಜವಾದ ಸೇವಕರು, ಅವರ ನಿಸ್ವಾರ್ಥ ಸೇವೆಯಿಂದ ಪಟ್ಟಣ ಸ್ವಚ್ಛವಾಗಿರುವ ಜತೆಗೆ ಪಟ್ಟಣದ ಜನ ನೆಮ್ಮದಿಯಿಂದ ಬದುಕು ಸಾಧಿಸುತ್ತಿದ್ದಾರೆ. ಪಟ್ಟಣದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಿ ದೂರ ಸಾಗಿಸುತ್ತಿರುವುದರಿಂದ ಜನತೆ ಅರೋಗ್ಯವಾಗಿದ್ದಾರೆ. ಇಂತಹ ಉನ್ನತ ಮಟ್ಟದ ಕರ್ತವ್ಯ ನಿರ್ವಹಿಸುವ ಇವರಿಗೆ ಸರ್ಕಾರದ ಸವಲತ್ತುಗಳು ತಲುಪುವಂತಾಗಬೇಕು. ಅವರಿಗೆ ಸ್ವಂತ ಸೂರು, ಕುಟುಂಬದ ನಿರ್ವಹಣೆಗೆ ಬೇಕಾದ ಅಗತ್ಯ ಸವಲತ್ತುಗಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ಪಪಂ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಮಾತನಾಡಿ, ನಸುಕಿನಲ್ಲಿ ಸೇವೆಗೆ ಇಳಿಯುವ ಪೌರಕಾರ್ಮಿಕರಿಗೆ ಪ್ರತಿಯೊಬ್ಬರೂ ಕೃತಜ್ಞರಾಗಿರಬೇಕು. ಪಟ್ಟಣಕ್ಕೆ ಉತ್ತಮ ಹೆಸರು ಬರುವಲ್ಲಿ ಪೌರಕಾರ್ಮಿಕರ ಶ್ರಮ ಮುಖ್ಯ. ನಿರಂತರವಾಗಿ ಇತರರ ಸೇವೆಯಲ್ಲಿ ತೊಡಗಿರುವ ಪೌರಕಾರ್ಮಿಕರ ಬೇಡಿಕೆಗಳಿದ್ದರೆ ಅದನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ಪಪಂ ಸದಸ್ಯರಾದ ಕೆ.ವೆಂಕಟೇಶ್, ಜಿ.ಬಿ.ಧರ್ಮಪಾಲ್, ಎಂ.ಎ.ಹಂಝ, ಸುಧೀರ್, ಮನೋಜ್ ಕುಮಾರ್, ಕಮಲಮ್ಮ, ಖುರ್ಷಿದಾ ಬೇಗಂ, ಜಯಮ್ಮ, ಮುಖ್ಯಾಧಿಕಾರಿ ರಂಗಸ್ವಾಮಿ, ಆರೋಗ್ಯ ನಿರೀಕ್ಷಕ ಕೃಷ್ಣಯ್ಯ ಇತರರಿದ್ದರು.