ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ವಿದ್ಯಾರ್ಥಿಗಳಿಂದ ನಾಗರಿಕ ಅರಿವು ಸಂಚಾರ ಕಾರ್ಯಕ್ರಮ

23
Published on

ಮೈಸೂರು: ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ವಿದ್ಯಾರ್ಥಿಗಳಿಂದ ಶನಿವಾರ ನಗರದ ವಿವಿಧ ಭಾಗಗಳಲ್ಲಿ ನಾಗರಿಕ ಅರಿವು ಸಂಚಾರ ಕಾರ್ಯಕ್ರಮ ನೆರವೇರಿತು.

ವಿದ್ಯಾರ್ಥಿಗಳು ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸಿ ನಾಗರಿಕ ಹಕ್ಕು ಉಲ್ಲಂಘನೆಯ ಸ್ಥಳಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಫುಟ್‌ಪಾತ್ ಅತಿಕ್ರಮಣ, ಅಪಾಯಕಾರಿ ವಿದ್ಯುತ್ ತಂತಿಗಳು, ರಸ್ತೆಯ ಹಳ್ಳಕೊಳ್ಳಗಳು, ತ್ಯಾಜ್ಯ ನಿರ್ವಹಣೆಯ ಲೋಪದೋಷಗಳು, ಸಾರ್ವಜನಿಕ ಶೌಚಾಗೃಹ ನಿರ್ವಹಣೆ ಕೊರತೆ, ನೋ ಪಾಕಿರ್ಂಗ್ ಉಲ್ಲಂಘನೆಗಳು, ಮೊದಲಾದ ನಾಗರಿಕ ನಿಯಮಗಳ ಹಾಗೂ ಸಾಮಾಜಿಕ ಹಿತಾಸಕ್ತಿ ಉಲ್ಲಂಘನೆಯ ಪ್ರಕರಣಗಳ ಚಿತ್ರಣಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯುವ ಮೂಲಕ ಸಂಬಂಧಿಸಿದ ಇಲಾಖೆಗಳಿಗೆ ಸ್ವತಃ ದೂರು ಸಲ್ಲಿಸಲು ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡರು.

ವಿದ್ಯಾರ್ಥಿಗಳು ದಾಖಲಿಸಿರುವ ದೂರುಗಳ ಕುರಿತು ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳು ತೆಗೆದುಕೊಳ್ಳುವ ಕ್ರಮಗಳ ಸಹಿತ ಇಷ್ಟರಲ್ಲೇ ಶಾಲಾ ಆವರಣದಲ್ಲಿ ಪೌರಪ್ರಜ್ಞೆ ನನ್ನ ಕರ್ತವ್ಯ - ಪ್ರಶ್ನಿಸುವುದು ನನ್ನ ಹಕ್ಕು ಎಂಬ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ಶಾಲೆಯ ನಾಗರಿಕ ಜಾಗೃತಿ ಅಭಿಯಾನದ ಸಂಚಾಲಕತ್ವ ವಹಿಸಿರುವ ಶಿಕ್ಷಕಿಯರಾದ ಪೂಜಶ್ರೀ, ಭಾರ್ಗವಿ ತಿಳಿಸಿದ್ದಾರೆ. ಇಂದಿನ ನಾಗರಿಕ ಅರಿವು ಸಂಚಾರ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿಯರಾದ ಮಂಜುಳಾ, ಎಲಿಜಬೆತ್, ದೇಚಮ್ಮ, ವರ್ಷಾ, ಅರ್ಚನಾ, ರಕ್ಷಿತಾ, ಶುಭವತಿ ಭಾಗವಹಿಸಿ ಮಕ್ಕಳಿಗೆ ನೆರವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net