ಕರ್ಫ್ಯೂ ಮುಗಿದರೂ ಹೊರಬಾರದ ಜನ

2 ckm 11
Published on

ಚಿಕ್ಕಮಗಳೂರು: ಪ್ರಥಮ ಕರ್ಫ್ಯೂ ಮುಕ್ತ ಭಾನುವಾರ ಸಂಚಾರಕ್ಕೆ ಅವಕಾಶ ಇದ್ದರೂ ಜನ ಮುನ್ನೆಚ್ಚರಿಕೆ ಕ್ರಮದಿಂದ ಹೊರಗೆ ಬಾರದಿದ್ದರಿಂದ ಅಘೊಷಿತ ಲಾಕ್​ಡೌನ್ ಇದ್ದಂತಿತ್ತು.

ಬೆಳಗಿನಿಂದಲೇ ಮೋಡ ಮುಸುಕಿದ ವಾತಾವರಣದ ನಡುವೆ ಆಗಿಂದಾಗ್ಗೆ ಬೀಳುತ್ತಿದ್ದ ತುಂತುರು ಮಳೆಯಿಂದಾಗಿ ಜನರು ಬೀದಿಗಿಳಿಯುವ ಉತ್ಸಾಹ ತೋರಲಿಲ್ಲ. ಪ್ರಮುಖ ರಸ್ತೆಗಳು ಖಾಲಿಯಾಗಿದ್ದವು. ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿರುವ ಎಂ.ಜಿ.ರಸ್ತೆಯಲ್ಲಿ ವಾರದ ರಜೆ ಇರುವ ವ್ಯಾಪಾರ ಕೇಂದ್ರಗಳನ್ನು ಹೊರತುಪಡಿಸಿದರೆ ಉಳಿದ ವಾಣಿಜ್ಯ ಕೇಂದ್ರಗಳು ತೆರೆದಿದ್ದವು. ಮೀನು, ಮಾಂಸ, ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಇತರ ವ್ಯಾಪಾರ, ವಹಿವಾಟು ಸಹಜ ಸ್ಥಿತಿಗೆ ಮರಳಿಲ್ಲ. ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು. ಪೆಟ್ರೋಲ್ ಬಂಕ್​ಗಳು ತೆರೆದಿದ್ದರೂ ಗ್ರಾಹಕರು ವಿರಳವಾಗಿದ್ದರು. ಸಾರಿಗೆ ಹಾಗೂ ಸರಕು ವಾಹನಗಳ ಸಂಚಾರವೂ ಕಡಿಮೆಯಿತ್ತು.

ಬಹಳಷ್ಟು ಕಡೆಗಳಲ್ಲಿ ಪ್ರಮುಖ ರಸ್ತೆಗಳು ಸೇರಿದಂತೆ ಅನೇಕ ಗಲ್ಲಿಗಳು, ಪ್ರತಿ ಬಡಾವಣೆಯಲ್ಲಿ ಕನಿಷ್ಠ ಮೂರ್ನಾಲ್ಕು ರಸ್ತೆಗಳು ಸೀಲ್​ಡೌನ್ ಆಗಿದ್ದು, ವಾಹನಗಳು ಸುತ್ತಿ ಬಳಸಿ ಸಂಚರಿಸಬೇಕಾದ ಅನಿವಾರ್ಯತೆಯಿತ್ತು. ಸಾಕಷ್ಟು ಜನರಿಗೆ ಲಾಕ್​ಡೌನ್ ತೆರವಾಗಿರುವುದೇ ಗಮನಕ್ಕೆ ಬಂದಂತಿಲ್ಲ.

ಹೋಟೆಲ್​ಗಳಿಗೂ ಗ್ರಾಹಕರಿಲ್ಲ: ಹೋಟೆಲ್​ಗಳು ತೆರೆದಿದ್ದರೂ ಗ್ರಾಹಕರಿಲ್ಲದೆ ಬೆರಳೆಣಿಕೆ ಮಂದಿ ಮಾತ್ರ ಕಾಣಿಸಿದರು. ಮಕ್ಕಳು, ಮಹಿಳೆಯರು ಹಾಗೂ ವೃದ್ಧರಂತೂ ಬೀದಿಗಿಳಿಯಲೇ ಇಲ್ಲ. ಭಾನುವಾರದ ರಿಲ್ಯಾಕ್ಸ್ ಸಲುವಾಗಿ ಹೊರ ಬರುವ ವಿಹಾರಾರ್ಥಿಗಳು ಕಾಣಿಸಲಿಲ್ಲ. ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿಲ್ಲದೆ ಆಟೋ, ಟ್ಯಾಕ್ಸಿ ಮತ್ತಿತರ ವಾಹನಗಳು ಕೆಲಸವಿಲ್ಲದೆ ಉಳಿದವು.

ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ: ಮುಂಜಾನೆಯಿಂದ ನಗರದ ಸಾರಿಗೆ ನಿಗಮದ ಬಸ್​ಗಳನ್ನು ಸಂಚಾರಕ್ಕೆ ಬಿಡಲಾಗಿದ್ದರೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ಚಿಕ್ಕಮಗಳೂರು ವಿಭಾಗದಿಂದ 140 ಬಸ್​ಗಳನ್ನು ಸಂಚಾರಕ್ಕೆ ಬಿಡಲಾಗಿದ್ದು, ಚಿಕ್ಕಮಗಳೂರು ಡಿಪೋದಿಂದ 45, ಮೂಡಿಗೆರೆಯಿಂದ 22 ಹಾಗೂ ಕಡೂರಿನಿಂದ 35 ಬಸ್​ಗಳನ್ನು ಸಂಚಾರಕ್ಕೆ ಬಿಡಲಾಗಿತ್ತು.

ವರಮಹಾಲಕ್ಷ್ಮೀ ಹಬ್ಬ ಹಾಗೂ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಜೆಯಲ್ಲಿ ಬಂದವರು ಮನೆಯಿಂದ ಹೊರ ಬರಲಿಲ್ಲ. ಮರಳಿ ಹೊರಡುವವರ ಸುಳಿವೂ ಇದ್ದಂತಿಲ್ಲ. ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಐದು ಸೀಟುಗಳು ಮಾತ್ರ ಮುಂಗಡ ಬುಕ್ಕಿಂಗ್ ಆಗಿದ್ದವು.

ಬಸ್​ನಲ್ಲೂ ಸೋಂಕು ಭೀತಿ: ಲಾಕ್​ಡೌನ್ ತೆರವು ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಶೇ.30ರಷ್ಟು ಬಸ್ಸುಗಳನ್ನು ರಸ್ತೆಗಿಳಿಸಿದೆ. ಪ್ರಯಾಣಿಕರು ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ನಿರಾಸೆಗೆ ಕಾರಣವಾಗಿತ್ತು. ಬಸ್ ಪ್ರಯಾಣದಲ್ಲಿ ಸೋಂಕು ಭೀತಿ ಇರುವುದೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಚಿಕ್ಕಮಗಳೂರು ವಿಭಾಗದಿಂದ 140 ಬಸ್​ಗಳನ್ನು ಸಂಚಾರಕ್ಕೆ ಬಿಡಲಾಗಿದ್ದು, ಚಿಕ್ಕಮಗಳೂರು ಡಿಪೋದಿಂದ 45, ಮೂಡಿಗೆರೆಯಿಂದ 22 ಹಾಗೂ ಕಡೂರಿನಿಂದ 35 ಬಸ್​ಗಳನ್ನು ಸಂಚಾರಕ್ಕೆ ಬಿಡಲಾಗಿತ್ತು ಎಂದು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net