ಸ್ಥಳೀಯ ಸಂಸ್ಥೆಗಳಲ್ಲಿ ವೈಜ್ಞಾನಿಕ ರೀತಿ ಕಸ ವಿಲೇವಾರಿಯಾಗಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

City, town local bodies progress review meeting mandya
Published on

ಮಂಡ್ಯ: ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಮನೆಗಳಿಂದ ಕಸ ಸಂಗ್ರಹ ಮಾಡಿದ ಬಳಿಕ ಒಣ ಮತ್ತು ಹಸಿ ಕಸವೆಂದು ಬೇರ್ಪಡಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಸರಿಯಾಗಿ ಬಳಕೆ ಆಗಬೇಕು. ಈ ಹಿಂದೆ ಸಂಗ್ರಹವಾಗಿರುವ ಘನ ತ್ಯಾಜ್ಯ ವಸ್ತುಗಳನ್ನು ಸಹ ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 189 ಕಾಮಗಾರಿಯನ್ನು 44.46 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ 17 ಕೋಟಿ ರೂ ಮೊತ್ತದ ಸಾಕಷ್ಟು ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ. ಮಳವಳ್ಳಿ, ಮಂಡ್ಯ ಹಾಗೂ ಬೆಳ್ಳೂರಿನಲ್ಲಿ ಜನರ ಮನಸ್ಸಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂಬ ಮನೋಭಾವ ಮೂಡುವ ರೀತಿ ಸಾರ್ವಜನಿಕ ಶೌಚಗೃಹ ನಿರ್ಮಾಣ ಕಾಮಗಾರಿ ತೆಗೆದುಕೊಳ್ಳಲಾಗಿದೆ. ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯೊಳಗೆ ಬರುವ ಸಾರ್ವಜನಿಕ ಶೌಚಗೃಹವನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ವಿವಿಧ ಅನುದಾನದಡಿ ಕೈಗೊಂಡಿರುವ ರಸ್ತೆ, ಚರಂಡಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಸಂಪೂರ್ಣ ಮಾಡಬೇಕು. ನಗರ ಸಭೆಗೆ ಮೂಲ ಆದಾಯವಾದ ಆಸ್ತಿ ತೆರಿಗೆಯ ಸಂಗ್ರಹಣೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಫೆ.10ರೊಳಗೆ ಶೇ.85ರಷ್ಟು ಹಾಗೂ ಮಾರ್ಚ್ ಅಂತ್ಯದೊಳಗೆ ಶೇ.100ರಷ್ಟು ಪೂರ್ಣಗೊಳಸಬೇಕು. ಬಾಕಿ ಇರುವ ನೀರಿನ ಶುಲ್ಕ, ಅಂಗಡಿ ಮಳಿಗೆ ಬಾಡಿಗೆ ಶುಲ್ಕ ಹಾಗೂ ಟ್ರೇಡ್ ಲೈಸೆನ್ಸ್ ಪರವಾನಗಿ ನವೀಕರಣ ಶುಲ್ಕದ ವಸೂಲಾತಿಯಾಗಬೇಕು ಎಂದು ಸೂಚನೆ ನೀಡಿದರು.

ಪೌರಕಾರ್ಮಿಕರಿಗೆ ಗೃಹ ಯೋಜನೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದು, ಇದುವರೆಗೂ ಸುಮಾರು 155 ಪೌರಕಾರ್ಮಿಕರು ಫಲಾನುಭವಿಯಾಗಿದ್ದಾರೆ. ಬೆಳ್ಳೂರಿನಲ್ಲಿ 7 ಕಾಮಗಾರಿ ಬಾಕಿ ಇದ್ದು, ತ್ವರಿತವಾಗಿ ಪೂರ್ಣಗೊಳಿಸಬೇಕು. ವಾಜಪೇಯಿ ನಗರ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆಯಡಿ ನಿರ್ಮಾಣ ಹಂತದಲ್ಲಿ ಬಾಕಿ ಇರುವಂತಹ ಮನೆಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಮುಂದಿನ ತಿಂಗಳು ಸಭೆ ಕರೆಯಲಾಗುವುದು. ಅಷ್ಟರೊಳಗೆ ನಿಗದಿಪಡಿಸಿರುವಂತೆ ಗುರಿ ಸಾಧನೆಯಾಗಬೇಕು. ಇನ್ನು ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ನಗರ ಸಂಸ್ಥೆಗಳಿಗೆ ಬಿಡುಗಡೆಯಾಗಿರುವ 12 ಲಕ್ಷ ರೂ ಅನುದಾನವನ್ನು ಪೈಪ್‌ಲೈನ್ ಅಳವಡಿಸಲು ಹಾಗೂ ಬೋರ್‌ವೆಲ್ ತೆಗೆಸಬೇಕು ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಸೇರಿದಂತೆ ನಗರಸಭೆ, ಪುರಸಭೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net