

ಬೆಂಗಳೂರು: ಕಳೆದ ಮೂವರು ವರ್ಷಗಳಿ ದರ ಪರಿಷ್ಕರಣೆ ಮಾಡಿಲ್ಲ ಹೀಗಾಗಿ ಸಿಟಿ ಟ್ಯಾಕ್ಸಿ ಪ್ರಯಾಣ ದರವನ್ನು ಶೇ. ೫೦ರಷ್ಟು ಹೆಚ್ಚಳ ಮಾಡುವಂತೆ ವಿವಿಧ ಸಾರಿಗೆ ಸಂಘಟನೆಗಳು ಸೋಮವಾರ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸಿಟಿ ಟ್ಯಾಕ್ಸಿ ಪ್ರಯಾಣ ದರ ಹಾಗೂ ಅಗ್ರಿಗೇಟರ್ಸ್ ನಿಯಮದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಟ್ಯಾಕ್ಸಿಗಳ ದರ ನಿಗದಿ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಸಭೆ ನಡೆಸಿದರು.
ಈ ವೇಳೆ ವಿವಿಧ ಸಾರಿಗೆ ಸಂಘಟನೆಗಳು, ಸಿಟಿ ಟ್ಯಾಕ್ಸಿಗಳಿಗೆ ೨೦೨೦-೨೧ರಲ್ಲಿ ದರ ಪರಿಷ್ಕರಿಸಲಾಗಿತ್ತು. ಅದಾದ ನಂತರ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಕಳೆದ ಮೂರು ವರ್ಷಗಳಲ್ಲಿ ಡೀಸೆಲ್ ದರ ೧೬ ರೂ. ಹೆಚ್ಚಳವಾಗಿದೆ. ಜತೆಗೆ ಬಿಡಿ ಬಾಗಗಳು, ಸಿಎನ್‌ಜಿ, ವಾಹನಗಳ ದರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಸಿಟಿ ಟ್ಯಾಕ್ಸಿಗಳ ಪ್ರಯಾಣ ದರದಲ್ಲಿ ಶೇ. ೫೦ರಷ್ಟು ಹೆಚ್ಚಳ ಮಾಡಬೇಕು. ಸದ್ಯ ಸೆಡಾನ್ ವಾಹನದ ಸಿಟಿ ಟ್ಯಾಕ್ಸಿಗಳಿಗೆ ಪ್ರತಿ ಕಿಮೀಗೆ ೧೫ರಿಂದ ೧೬ ರೂ. ದರವಿದ್ದು, ಅದನ್ನು ೨೨.೫ ರೂ.ನಿಂದ ೨೩.೫ ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿದರು.
ಪರಿಶೀಲಿಸಿ ನಿರ್ಧಾರ:
ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಅಧಿಕಾರಿಗಳು, ದರ ಹೆಚ್ಚಳ ಕುರಿತಂತೆ ಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗುವುದು. ಅಲ್ಲದೆ, ಅದರ ಸಾಧಕ-ಬಾದಕ ಪರಿಶೀಲಿಸಿ ನಿರ್ಧರಿಸಲಾಗುವುದು. ಸಾರ್ವಜನಿಕರಿಗೆ ಹೊರೆಯಾಗದಂತೆ, ಸಿಟಿ ಟ್ಯಾಕ್ಸಿ ಮಾಲೀಕರಿಗೆ ಅನುಕೂಲವಾಗುವಂತೆ ದರ ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿದರು.