ನಗರದ ರಸ್ತೆ ಅಭಿವೃದ್ಧಿ ಎಲ್ಲರ ಹೊಣೆ: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

road cs
Published on

ಬೆಂಗಳೂರು: ಮಹಾನಗರದಲ್ಲಿರುವ ರಸ್ತೆಗಳನ್ನು ಬಿಬಿಎಂಪಿಯ ಜತೆಗೆ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಿದರೆ ಮಾತ್ರ ಅಭಿವೃದ್ಧಿಗೊಳಿಸಲು ಸಾಧ್ಯವಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರು.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಆಯೋಜಿಸಿರುವ ‘ನಮ್ಮ ರಸ್ತೆ - 2025’ ಕಾರ್ಯಾಗಾರದ 2ನೇ ದಿನವಾದ ಶುಕ್ರವಾರ ‘ಪಾಲಿಕೆಯ ಇಂಜಿನಿಯರ್‌ಗಳ ಸಾಮರ್ಥ್ಯ ವೃದ್ಧಿ’ ವಿಷಯದ ಬಗ್ಗೆ ಮಾತನಾಡಿದರು.

ಬೆಂಗಳೂರಿನ ಹವಾಮಾನದ ಕುರಿತು ನಾಗರಿಕರು ಎಷ್ಟು ಸಂತಸ ವ್ಯಕ್ತಪಡಿಸುತ್ತಾರೋ, ಅಷ್ಟೇ ಪ್ರಮಾಣದಲ್ಲಿ ರಸ್ತೆಗಳ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ. ಈ ಸಮಸ್ಯೆಯ ಗಾತ್ರ ಹಾಗೂ ಅದಕ್ಕೆ ಪರಿಹಾರಗಳೇನು ಎಂಬುದನ್ನು ನಿಖರವಾಗಿ ಕಂಡುಕೊಳ್ಳಬೇಕಿದೆ. ಜತೆಗೆ ನಗರ ಬೆಳೆದಂತೆಲ್ಲ ಎಲ್ಲ ಜನರೂ ರಾಜಧಾನಿಗೆ ಬರಲು ಹೆಚ್ಚು ಉತ್ಸುಕತೆ ಹೊಂದಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಿದರೆ ಅದಕ್ಕಿಂತ ಹೆಚ್ಚಾಗಿ ಜನಸಂಖ್ಯೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಕೈತಪ್ಪುತ್ತಿದೆ. ಅದನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದರು.

ಲಾಸ್ಟ್ ಮೈಲ್ ಕನೆಕ್ಟಿವಿಟಿ ಅಗತ್ಯ:

ಬೆಂಗಳೂರಿನ ನಾಗರಿಕರು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕಿದ್ದರೂ, ಲಾಸ್ಟ್ ಮೈಲ್ ಕನೆಕ್ಟಿವಿಟಿ ಸಮಸ್ಯೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಇಲೆಕ್ಟಿಕ್ ವಾಹನಗಳು, ಶೇರ್ ಟ್ರಾರ್ನ್ಸ್‌ಪೋರ್ಟ್ ಸೇರಿ ಇನ್ನಿತರ ವಾಹನಗಳನ್ನು ಸಂಪರ್ಕ ಕೊಂಡಿಯ ವ್ಯವಸ್ಥೆ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಾಲಿನಿ ರಜನೀಶ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಅಭಿಯಂತರ ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಶಶಿಕುಮಾರ್, ಲೋಕೇಶ್, ರಾಜೇಶ್, ಆಯೋಜಕ ಶ್ರೀನಿವಾಸ್ ಅಲಿವಿಲ್ಲಿ ಉಪಸ್ಥಿತರಿದ್ದರು.

ಕೈಪಿಡಿಯಲ್ಲಿನ ಅಂಶ ಪರಿಗಣಿಸಿ:

ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸಿದರೂ ಒಂದೇ ಮಾದರಿಯ ವಿನ್ಯಾಸವಿರುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಡುಗಡೆಗೊಳಿಸಿರುವ ನಮ್ಮ ರಸ್ತೆ ಕೈಪಿಡಿಯಲ್ಲಿರುವ ಪ್ರಮಾಣಿತ ಕಾರ್ಯವಿಧಾನವನ್ನು ಸರಿಯಾಗಿ ಅನುಸರಿಸಬೇಕು. ಈ ಎಲ್ಲ ಅಂಶಗಳನ್ನು ಇಂಜಿನಿಯರ್‌ಗಳು ಸರಿಯಾಗಿ ಅಳವಡಿಸಿಕೊಳ್ಳಬೇಕು. ಪಾಲಿಕೆ ಕೈಗೆತ್ತಿಕೊಳ್ಳುವ ವಿವಿಧ ಕಾಮಗಾರಿ, ಜಲಮಂಡಳಿಯ ಕೊಳವೆ ಮಾರ್ಗ, ಒಳಚರಂಡಿ ವ್ಯವಸ್ಥೆ, ಬೆಸ್ಕಾಂ/ಕೆಪಿಟಿಸಿಎಲ್ ಕೇಬಲ್‌ಗಳು, ಒಎಫ್‌ಸಿ ಕೇಬಲ್‌ಗಳಿಗೆ ಅಳವಡಿಸುವ ಡಕ್ಟ್‌ಗಳು ಯಾವ ರೀತಿ ಇರಬೇಕು, ಯಾವ ಕಡೆ ನಿರ್ಮಿಸಬೇಕೆಂಬುದನ್ನು ತಪ್ಪದೆ ಪಾಲಿಸಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net