

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪ್ರಯಾಣಿಕರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ನಿರ್ಮಾಣಗೊಂಡಿರುವ ಇಲ್ಲಿನ ವಂಟಮೂರಿ ಕಾಲನಿ ಮುಖ್ಯ ಬಸ್ ತಂಗುದಾಣ ನಿರ್ವಹಣೆ ಇಲ್ಲದೆ ಪಾಳು ಬಿದ್ದು ಹಾಳಾಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಶ್ರೀನಗರದಿಂದ ಆಟೋನಗರ, ರಾಮತೀರ್ಥ ನಗರಕ್ಕೆ ಸಂಪರ್ಕ ಕಲ್ಪಿಸುವ ದ್ವಿಪಥ ರಸ್ತೆಯಲ್ಲಿನ ವಂಟಮುರಿ ಆಶ್ರಯ ಕಾಲನಿ ಪ್ರಮುಖ ಬಸ್ ನಿಲ್ದಾಣವಾಗಿರುವ ಅಂಬೇಡ್ಕರ್ ವೃತ್ತದಲ್ಲಿ ಜನರ ಅನುಕೂಲಕ್ಕಾಗಿ ಈ ತಂಗುದಾಣ ನಿರ್ಮಿಸಲಾಗಿದೆ. ನಿರ್ವಹಣೆ ಇಲ್ಲದೆ ತಂಗುದಾಣದ ಸುತ್ತ ಗಿಡಗಂಟಿಗಳು ಬೆಳೆದು ನಿಗೂಢ ಸ್ಥಳದಂತಾಗಿದೆ. ಹೀಗಾಗಿ ಜನರು ಇತ್ತ ಹೋಗಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.
ಈ ಭಾಗದಲ್ಲಿ ಐದಾರು ಶಾಲೆ-ಕಾಲೇಜುಗಳಿವೆ. ಸಾಯಿ ಮಂದಿರ ಸೇರಿದಂತೆ ಪ್ರಮುಖ ದೇವಸ್ಥಾನಗಳಿವೆ. ಜತೆಗೆ ವಂಟಮುರಿ ಆಶ್ರಯ ಕಾಲನಿ, ಕೈಗಾರಿಕಾ ಪ್ರದೇಶವೂ ಇದೇ ಮಾರ್ಗದಲ್ಲಿ ಬರುತ್ತದೆ. ಹೀಗಾಗಿ ಈ ತಂಗುದಾಣ ಅನೇಕರಿಗೆ ಆಶ್ರಯವಾಗಿದೆ. ಆದರೆ, ಇದರ ಸುತ್ತ ಗಿಡಗಂಟಿಗಳು ಇರುವ ಕಾರಣಕ್ಕೆ ಪ್ರಯಾಣಿಕರು ರಸ್ತೆ ಪಕ್ಕದಲ್ಲಿ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಚಳಿ, ಗಾಳಿ, ಮಳೆಯಿಂದ ರಕ್ಷಣೆ ಪಡೆಯಲು ಪ್ರಯಾಣಿಕರು ಹರಸಾಹಸ ಪಡುವಂತಾಗಿದೆ. ಇನ್ನೂ ರಾತ್ರಿ ಹೊತ್ತು ಮದ್ಯಪಾನಿಗಳ ಅಡ್ಡೆಯಾಗಿ ಪರಿಣಮಿಸಿದೆ. ಇದರಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ತಂಗುದಾಣದ ಸುತ್ತ ಸ್ವಚ್ಛತೆ ಕಾಯ್ದುಕೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಆಗ್ರಹ ಎಲ್ಲರದ್ದು.