

ಸುಳ್ಯ: ನಗರ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುದಾನ ತರಿಸುವ ಕುರಿತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನ.ಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೊ ಅವರು ಪುತ್ತೂರಿನ ಶಾಸಕರು ಒಳ್ಳೆಯ ಅನುದಾನ ತರಿಸುತ್ತಾರೆ. ನಮ್ಮ ಶಾಸಕರಿಂದ ಏಕೆ ಆಗುತ್ತಿಲ್ಲ. ಅವರಿಗೆ ತಾಕತ್ ಇಲ್ಲವಾ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಯಿಂದ ಕುಪಿತರಾದ ಬಿಜೆಪಿ ಸದಸ್ಯ ವಿನಯ್ ಕುಮಾರ್ ಕಂದಡ್ಕರವರು ಈ ಮಾತು ಸರಿಯಲ್ಲ. ನಮ್ಮ ಶಾಸಕರ ತಾಕತ್ ಬಗ್ಗೆ ಕೇಳಲು ನೀವು ಯಾರು? ಕೂಡಲೇ ಈ ಮಾತನ್ನು ಹಿಂಪಡೆಯ ಬೇಕೆಂದು ಪಟ್ಟುಹಿಡಿದರು. ಇದಕ್ಕೆ ಪೂರಕವಾಗಿ ಬಿಜೆಪಿಯ ಎಲ್ಲ ಸದಸ್ಯರು ಮತ್ತು ಅಧ್ಯಕ್ಷರು ನಾಮ ನಿರ್ದೇಶಕ ಸದಸ್ಯರ ಮಾತಿಗೆ ಖಂಡನೆ ವ್ಯಕ್ತಪಡಿಸಿದರು. ಸದಸ್ಯರಾದ ಉಮ್ಮರ್ ಕೆ ಎಸ್, ವೆಂಕಪ್ಪ ಗೌಡ, ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು.
ಪುರಭವನದ ಅಭಿವೃದ್ಧಿ ಕುರಿತಾಗಿ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಹಾಗೂ ಎಂ.ವೆಂಕಪ್ಪ ಗೌಡರ ಮಧ್ಯೆ ಕಾವೇರಿದ ಚರ್ಚೆ ನಡೆಯಿತು. ರಿಯಾಝ್ ಅಸಮಾಧಾನಗೊಂಡು ಸಭೆಯಿಂದ ಹೊರ ನಡೆದರು.
ನಗರದ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಯಿತು. ನಗರ ಪಂಚಾಯಿತಿ ಸದಸ್ಯರ ಗಮನಕ್ಕೆ ತಾರದೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ಸಭೆಯಲ್ಲಿ ನಡೆಯಿತು. ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಉಪಸ್ಥಿತರಿದ್ದರು.