ನಗರದಲ್ಲಿ ಹೈಅಲರ್ಟ್, ಬಿಗಿ ತಪಾಸಣೆ

BNG police
Published on

ಮೈಸೂರು: ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಮೈಸೂರಿನ ನಂಟು ಇರುವ ಹಿನ್ನೆಲೆಯಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದು, ನಗರಾದ್ಯಂತ ಬಿಗಿ ತಪಾಸಣೆ ನಡೆಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ವಾಹನಗಳ ತಪಾಸಣೆಯನ್ನು ಹೆಚ್ಚಿಸಿರುವ ಪೊಲೀಸರು, ಪ್ರತಿಯೊಬ್ಬರ ಡಿಎಲ್, ವಾಹನದ ಎಲ್ಲ ರೀತಿಯ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಅನುಮಾನ ಬರುವಂತೆ ಇರುವ ದಾಖಲಾತಿಗಳನ್ನು ವಶಪಡಿಸಿಕೊಂಡು, ಅಂತಹ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಕಣ್ಗಾವಲು ಹೆಚ್ಚಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ನಗರಾದ್ಯಂತ ಬೀಟ್ ಹೆಚ್ಚಿಸಿದ್ದಾರೆ.

ಅಲ್ಲದೆ, ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ವಸ್ತುಪ್ರದರ್ಶನ ಆವರಣ, ಚರ್ಚ್, ರೈಲು ನಿಲ್ದಾಣ, ಬಸ್ ನಿಲ್ದಾಣ, ಪ್ರಮುಖ ವೃತ್ತಗಳು, ರಸ್ತೆಗಳು ಸೇರಿದಂತೆ ನಗರದ ಹೃದಯ ಭಾಗದಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ಹೋಟೆಲ್‌ಗಳು ಹಾಗೂ ಇತರ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಸಾರ್ವಜನಿಕರನ್ನು ವಿಚಾರಣೆ ಮಾಡುತ್ತಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ಹದ್ದಿನ ಕಣ್ಣಿರಿಸಿ ಹೊರಗಿನಿಂದ ಬರುವ ವಾಹನಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದೆ.

ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಹೊರಗಿನಿಂದ ಬರುವ ಪ್ರಯಾಣಿಕರು ತರುವ ಲಗ್ಗೇಜ್‌ಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದೆ. ಹೋಟೆಲ್‌ಗಳಲ್ಲಿ ತಂಗಿರುವ ಪ್ರವಾಸಿಗರ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ನಗರಾದ್ಯಂತ ಬಾಡಿಗೆ ಮನೆ ಹಾಗೂ ಬಾಡಿಗೆ ಕೊಠಡಿಗಳಲ್ಲಿ ವಾಸವಿರುವವರ ದಾಖಲಾತಿಗಳನ್ನು ಮನೆಯ ಮಾಲೀಕರು ಕಟ್ಟುನಿಟ್ಟಾಗಿ ಪರಿಶೀಲಿಸಬೇಕೆಂದು ಆದೇಶಿಸಲಾಗಿದ್ದು, ಮಾಲೀಕರು ತಮ್ಮ ಮನೆಯಲ್ಲಿ ವಾಸವಿರುವ ಬಾಡಿಗೆದಾರರ ದಾಖಲಾತಿಗಳನ್ನು ಪರಿಶೀಲಿಸಿ, ಅದರ ಪ್ರತಿಯನ್ನು ಪಡೆದುಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net