ಭಾಗ್ಯನಗರ ಘೋಷಣೆ, ಬಾಗೇಪಲ್ಲಿಯಲ್ಲಿ ಸಂಭ್ರಮಾಚರಣೆ

IMG_20250704_211843.jpg
Published on

ಚಿಕ್ಕಬಳ್ಳಾಪುರ: ಆಂಧ್ರದ ಗಡಿಭಾಗದಲ್ಲಿರುವ ಜಿಲ್ಲೆಯ ಪ್ರಮುಖ ತಾಲೂಕಾದ ಬಾಗೇಪಲ್ಲಿಯ ಹೆಸರು ಇನ್ನು ಮುಂದೆ ಭಾಗ್ಯನಗರ.
ಹೌದು! ರಾಜ್ಯ ಸಚಿವ ಸಂಪುಟದಲ್ಲಿ ಈ ಭಾಗದ ಪರವಾಗಿ ಕೈಗೊಂಡ ನಿರ್ಣಯಗಳ ಪೈಕಿ ಈ ಮರು ನಾಮಕರಣದ ಆದೇಶವೂ ಒಂದು. ಇದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಇದರೊಂದಿಗೆ ಊರಿಗೆ ಹೆಸರಿಗೆ ತೆಲುಗಿನ ಪದ ಸೂಚಕವಿದೆ ಎಂಬ ಅಪಸ್ವರಕ್ಕೆ ತೆರೆ ಬಿದ್ದಿದ್ದು ಹಲವು ದಶಕಗಳ ಬಳಿಕ ಸ್ಥಳೀಯ ಜನ ಸಮೂಹದ ಬೇಡಿಕೆ ಸಾಕಾರಗೊಂಡಿದೆ.
ತೆಲುಗು ಪ್ರಭಾವವನ್ನು ಹೊಂದಿರುವ ಬಾಗೇಪಲ್ಲಿಯಲ್ಲಿ ಕನ್ನಡಮಯ ವಾತಾವರಣ ನಿರ್ಮಾಣವಾದ ಸಂಕೇತವಾಗಿ ಊರಿನ ಹೆಸರನ್ನು ಭಾಗ್ಯನಗರವನ್ನಾಗಿ ಮರು ನಾಮಕರಣಗೊಳಿಸಬೇಕೆಂಬ ಒತ್ತಾಯವೂ ಹಲವು ವರ್ಷಗಳಿಂದಲೂ ಕೇಳಿ ಬರುತ್ತಿತ್ತು. ಭಾಗ್ಯನಗರ ಹೋರಾಟ ಸಮಿತಿ, ಕನ್ನಡ ಸಾಹಿತ್ಯ ಪರಿಷತ್‌, ದಲಿತ, ರೈತ ಹಾಗೂ ಪ್ರಗತಿಪರ ಸಂಘಟನೆಗಳು ನಿರಂತರವಾಗಿ ಮನವಿ ಪತ್ರಗಳ ಸಲ್ಲಿಕೆ, ಹಕ್ಕೊತ್ತಾಯದ ಮೂಲಕ ಸರ್ಕಾರದ ಗಮನ ಸೆಳೆಯುತ್ತಲೇ ಇತ್ತು. ಇನ್ನು ಇದರ ಒತ್ತಡದ ಹಿನ್ನೆಲೆಯಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಕಳೆದ ವಿಧಾನಸಭಾ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಿ, ತ್ವರಿತ ಘೋಷಣೆಗೆ ಒತ್ತಾಯಿಸಿದ್ದರು. ಅದರಂತೆ ಮರು ನಾಮಕರಣದ ವಿಚಾರವಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘಟನೆಗಳು ಸೇರಿದಂತೆ ಸಾರ್ವಜನಿಕರೊಂದಿಗೆ ಸಾಧಕ ಬಾಧಕಗಳ ಚರ್ಚೆಗೆ ಸಭೆ ನಡೆಸಲು ಹಾಗೂ ಸಮಗ್ರ ವರದಿ ಸಲ್ಲಿಸಲು ಕಂದಾಯ ಇಲಾಖೆಯು ಇಲ್ಲಿನ ಆಡಳಿತ ಯಂತ್ರಾಂಗಕ್ಕೆ ಸೂಚಿಸಿದ್ದು ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿ, ಹೆಸರು ಬದಲಾಯಿಸುವ ನಿರ್ಣಯ ಕೈಗೊಳ್ಳಲಾಗಿದೆ.

*ಶಾಸಕರು, ಹೋರಾಟಗಾರ ಫಲ
ಶತಾಯ ಗತಾಯ ಬಾಗೇಪಲ್ಲಿಯನ್ನು ಭಾಗ್ಯ ನಗರವನ್ನಾಗಿಸಲಾಗುತ್ತದೆ ಎಂಬುದಾಗಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದ್ದರು. ಇದರ ನಡುವೆ ಭಾಗ್ಯನಗರ ಹೋರಾಟ ಸಮಿತಿ ಅಧ್ಯಕ್ಷ ಎಸ್‌.ಎಸ್‌.ಶ್ರೀನಿವಾಸ್‌, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎನ್.ಹರೀಶ್‌, ಸ್ವಾಭಿಮಾನಿ ಬಣದ ಅಧ್ಯಕ್ಷ ಬಿಟಿಸಿ ಸೀನಾ, ಕರವೇ ಸಂಘಟನೆಗಳ ಅಧ್ಯಕ್ಷ ಬಿ.ಎ.ಬಾಬಾಜಾನ್‌ ಸೇರಿದಂತೆ ಅನೇಕ ಹೋರಾಟಗಾರರು ಬೇಡಿಕೆ ಈಡೇರಿಕೆಗೆ ತಾಲೂಕು ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೂ ಮನವಿ ಪತ್ರಗಳನ್ನು ಸಲ್ಲಿಸಿದ್ದು ವಿಳಂಬವಾಗಿಯಾದರೂ ಎಲ್ಲರ ಹೋರಾಟದ ಫಲವಾಗಿ ಬೇಡಿಕೆಯೂ ಈಡೇರಿದೆ. 

*ಪಲ್ಲಿಗಳ ಕತೆಯೇನು?
ಬಾಗೇಪಲ್ಲಿಯೇನೂ ಭಾಗ್ಯನಗರವಾಗಿ ಪರಿವರ್ತನೆಯಾಯಿತು. ಆದರೆ, ಇದರಲ್ಲಿ ವ್ಯಾಪ್ತಿಯಲ್ಲಿನ ಬಹುತೇಕ ಹಳ್ಳಿಗಳು ಈಗಲೂ ತೆಲುಗಿನ ಹೆಸರಿನಲ್ಲಿಯೇ ಕರೆಸಿಕೊಳ್ಳುತ್ತೇವೆ. ಬಹುತೇಕ ಸರ್ಕಾರಿ ನಾಮಫಲಕಗಳು, ದಾಖಲೆಗಳಲ್ಲಿ ನೆರೆ ರಾಜ್ಯದ ಭಾಷೆಯ ಪದಗಳಲ್ಲಿಯೇ ಉಳಿದುಕೊಂಡಿವೆ. ಅರಿಗೆಪಲ್ಲಿ, ಬಟ್ಲಪಲ್ಲಿ, ಬೋಡಿಕದಿರೇಪಲ್ಲಿ, ಚಿನಕಾಯಲಪಲ್ಲಿ, ದಿಗವನೆಟ್ಟಕುಂಟ್ಲಪಲ್ಲಿ, ಗುಂಡ್ಲಪಲ್ಲಿ, ಕೊಂಡವಾರಿಪಲ್ಲಿ, ಮುದ್ದಲಪಲ್ಲಿ, ನಲ್ಲಚೆರವು, ಪೂಲವಾರಿಪಲ್ಲಿ ಸೇರಿದಂತೆ ಇಲ್ಲಿನ ೨೧೧ ಗ್ರಾಮಗಳ ಪೈಕಿ ಬಹುತೇಕ ಹೆಸರುಗಳು ತೆಲುಗಿನಲ್ಲಿ ಸಂಬೋಧಿಸಿದ ಪದದ ಅರ್ಥವನ್ನು ಸಾರುತ್ತವೆ. ಇವು ಯಾವಾಗ ಕನ್ನಡಮಯವಾಗುತ್ತವೆ ಎಂಬ ಪ್ರಶ್ನೆ ಚರ್ಚೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net