

ಬೆಳಗಾವಿ : ಸ್ಮಾರ್ಟ್ ಸಿಟಿಯಲ್ಲಿ ಒಳಚರಂಡಿ ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗಲು ನಿರ್ಮಿಸಿರುವ ದೊಡ್ಡ ನಾಲಾಗಳು ಇದೀಗ ಹೂಳಿನಿಂದ ಭರ್ತಿಯಾಗಿದ್ದು, ವರ್ಷಗಳು ಕಳೆದರೂ ಸ್ವಚ್ಛತಾ ಕಾರ್ಯ ನಡೆದಿಲ್ಲ.
ಮಹಾನಗರ ಪಾಲಿಕೆ, ದಂಡು ಮಂಡಳಿ ಪ್ರದೇಶಗಳ ವ್ಯಾಪ್ತಿಯಲ್ಲಿ ಬೃಹತ್ ನಾಲಾಗಳಿವೆ. ಆದರೆ, ವರ್ಷಗಳು ಕಳೆದರೂ ಯಾವುದೇ ನಾಲಾದಲ್ಲಿ ಸ್ವಚ್ಛತೆ, ದುರಸ್ತಿ ಹಾಗೂ ಹೂಳೆತ್ತುವ ಕೆಲಸ ನಡೆಯುತ್ತಿಲ್ಲ. ಪರಿಣಾಮ ಮಳೆಗಾಲದ ಸಂದರ್ಭದಲ್ಲಿ ನೀರು ಸರಳವಾಗಿ ಹರಿದು ಹೋಗದೆ ಒಂದೇ ಸ್ಥಳದಲ್ಲಿ ನಿಂತು ನಾನಾ ರೀತಿಯ ಸಮಸ್ಯೆ ಹುಟ್ಟು ಹಾಕುತ್ತಿದೆ. ಅಲ್ಲದೆ, ನಾಲಾ ಸುತ್ತಮುತ್ತಲಿನ ನಿವಾಸಿಗಳು ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಿಸುತ್ತಿದ್ದಾರೆ.
ಕಳೆದ ವರ್ಷ ಬಳ್ಳಾರಿ ನಾಲಾ ಪ್ರವಾಹದಿಂದ ನಗರದಲ್ಲಿನ ವಿವಿಧ ನಾಲಾಗಳು, ಚರಂಡಿಗಳು ಭರ್ತಿಯಾಗಿ ಮನೆಗೆಳಿಗೂ ನೀರು ನುಗ್ಗಿತ್ತು. ಮತ್ತೊಂದೆಡೆ ರಸ್ತೆಗಳ ಮೇಲೆ ನೀರು ನಿಂತು ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದರಿಂದ ಲಕ್ಷಾಂತರ ರೂ. ಮೌಲ್ಯದ ಹಾನಿ ಉಂಟಾಗಿತ್ತು. ಆದರೆ, ವರ್ಷ ಕಳೆದರೂ ಪಾಲಿಕೆ, ದಂಡುಮಂಡಳಿ ಅಧಿಕಾರಿಗಳು ಮಾತ್ರ ನಾಲಾಗಳನ್ನು ಸಮರ್ಪಕವಾಗಿ ದುರಸ್ತಿ ಮಾಡುತ್ತಿಲ್ಲ. ಇದೀಗ ಮಳೆಗಾಲ ಆರಂಭವಾಗಿದ್ದು ಮತ್ತೆ ನೀರು ಅಲ್ಲಲ್ಲಿ ನಿಲ್ಲುತ್ತಿದೆ.
ಸಾರ್ವಜನಿಕರ ಅಸಮಾಧಾನ: ಪಾಲಿಕೆ ಮತ್ತು ದಂಡು ಮಂಡಳಿ ನಿರ್ಲಕ್ಷೃದಿಂದ ಪ್ರತಿವರ್ಷ ಮಳೆಗಾದಲ್ಲಿ ನಗರದ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಚರಂಡಿ, ನಾಲಾಗಳ ಸ್ವಚ್ಛತೆ ಕೆಲಸದ ಮಾಡದೆ ಕೇವಲ ರಸ್ತೆ ದುರಸ್ತಿ ಮಾಡುತ್ತಾರೆ. ಮಳೆಗಾಲ ಬಂದಾಗ ಚರಂಡಿ ದುರಸ್ತಿಗೆ ಮುಂದಾಗುತ್ತಿದ್ದಾರೆ. ಇದರಿಂದ ಸರ್ಕಾರ ನೀಡುವ ಕೋಟ್ಯಂತರ ರೂ. ಅನುದಾನ ಸದ್ಬಳಕೆಯಾಗಲು ಕೂಡ ತೊಡಕಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಾಲಾ ದುರಸ್ತಿ, ಸ್ವಚ್ಛತೆ ಕಾಮಗಾರಿ ಆರಂಭವಾಗಿದ್ದು, ಹಂತ ಹಂತವಾಗಿ ಪೂರ್ಣಗೊಳ್ಳಲಿದೆ. ಈಗಾಗಲೇ ಬಳ್ಳಾರಿ ನಾಲಾವರೆಗೆ ಪರಿಶೀಲನೆ ನಡೆಸಿದ್ದು, ಹೂಳು ತುಂಬಿರುವ ಭಾಗದಲ್ಲಿ ಸ್ವಚ್ಛತೆ ಕೈಗೊಂಡು ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಕ್ಯಾಂಪ್ ಪ್ರದೇಶಗಳ ವ್ಯಾಪ್ತಿಯ ನಾಲಾಗಳನ್ನು ಮಹಾನಗರ ಪಾಲಿಕೆ ವತಿಯಿಂದಲೇ ಸ್ವಚ್ಛ ಮಾಡಲಾಗುತ್ತಿದೆ.
| ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ, ಬೆಳಗಾವಿ