ಬಜೆಟ್‌ಗಾಗಿ ಅಭಿಪ್ರಾಯ ಸಂಗ್ರಹ ; ಆದಾಯ ಕ್ರೋಡೀಕರಣದೊಂದಿಗೆ ಮೂಲಸೌಕರ್ಯಕ್ಕೆ ಒತ್ತು ನೀಡಲು ಸಲಹೆ

kolar nagarasabhe
Published on

ಕೋಲಾರ : ಈ ಸಾಲಿನ ಬಜೆಟ್ ಮಂಡನೆಗಾಗಿ ಸಿದ್ಧತೆ ಹಿನ್ನೆಲೆಯಲ್ಲಿ ಸೋಮವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಪುರಪಿತೃಗಳು, ವಿವಿಧ ಸಂಘ-ಸಂಸ್ಥೆ ಪ್ರತಿನಿಧಿಗಳು ನೀಡಿದ ಸಲಹೆ ಗಮನದಲ್ಲಿಟ್ಟುಕೊಂಡು ಉತ್ತಮ ಬಜೆಟ್ ಮಂಡನೆ ಮಾಡುವುದಾಗಿ ನಗರಸಭೆ ಅಧ್ಯಕ್ಷೆ ಶ್ವೇತಾ ಹೇಳಿದರು.

ಜನರು ನಗರಸಭೆಯಿಂದ ಸಾಕಷ್ಟು ನಿರೀಕ್ಷೆ ಮಾಡುತ್ತಿದ್ದಾರೆ, ಮೂಲಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯ. ಆದರೆ ಆರ್ಥಿಕ ಸಂಪನ್ಮೂಲ ಪರಿಗಣಿಸಿ ನೀರು, ದೀಪ, ಸ್ವಚ್ಛತೆ ಸೇರಿ ಇನ್ನಿತರ ಸೌಕರ್ಯಗಳ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ತೆರಿಗೆ ನಂಬಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಕಷ್ಟ, ಹಾಗಾಗಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸುವುದಕ್ಕೂ ವಿಶೇಷ ಗಮನ ಹರಿಸಲಾಗಿದೆ, ಜನರಿಗೆ ಹೊರೆಯಾಗದ ರೀತಿಯಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗುವುದು ಎಂದರು. ಉಪಾಧ್ಯಕ್ಷ ಪ್ರವೀಣ್ ಗೌಡ ಮಾತನಾಡಿ, ನಗರ ಹಸರೀಕರಣ, ಬಡವರಿಗೆ ವಸತಿ ಭಾಗ್ಯ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ, ನಗರಸಭೆಗೆ ಸೇರಿದ ಆಸ್ತಿಗಳಿಂದ ಆದಾಯ ಸಂಗ್ರಹಿಸಲು ಯೋಜನೆಗಳನ್ನು ಬಜೆಟ್‌ನಲ್ಲಿ ತಿಳಿಸಲಾಗುವುದು ಎಂದರು.

ಪೌರಾಯುಕ್ತ ಆರ್.ಶ್ರೀಕಾಂತ್ ಮಾತನಾಡಿ, ವಿವಿಧ ಬಾಬ್ತಿನ ಕಂದಾಯ ವಸೂಲಾತಿಯಲ್ಲಿ ಶೇ.80 ಪ್ರಗತಿ ಸಾಧಿಸಲಾಗಿದೆ, ನೀರಿನ ಕರ ವಸೂಲಿ ಸ್ವಲ್ಪ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಅಗತ್ಯ ಸೇವೆ ಒದಗಿಸುವ ಮೂಲಕ ನಗರಸಭೆಗೆ ಆದಾಯ ಬರುವಂತೆ ಎಚ್ಚರವಹಿಸಲಾಗುವುದು ಎಂದರು.

ಉಪಯುಕ್ತ ಸಲಹೆಗಳು: ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಿ.ಎಂ.ಮುಬಾರಕ್ ಬಜೆಟ್ ಹೇಗಿರಬೇಕೆಂದು ಅನುಭವ ಅನಾವರಣಗೊಳಿಸಿದರು. ಬಜೆಟ್ ಎಂದರೆ ಕೇವಲ ಆದಾಯ ಮತ್ತು ವ್ಯಯ ವಿಚಾರವಲ್ಲ, ಬಜೆಟ್ ಗಾತ್ರ ಮುಖ್ಯವಲ್ಲ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಯಾವ ಮೂಲದಿಂದ ಹಣ ಒದಗಿಸಬೇಕೆಂಬ ದೂರದೃಷ್ಟಿ ಮುಖ್ಯ, ನಗರೋತ್ಥಾನ, 15ನೇ ಹಣಕಾಸು, ಎಂಪಿ, ಎಂಎಲ್‌ಎ, ಎಂಎಲ್ಸಿ ನಿಧಿ ಹೀಗೆ ಅನೇಕ ಅನುದಾನ ಸಿಗುವುದರಿಂದ ಅಂದಾಜು ಪಟ್ಟಿ ಮಾಡಿ ಬಜೆಟ್‌ನಲ್ಲಿ ತೋರಿಸದಿದ್ದರೆ ಸರ್ಕಾರದಿಂದ ಬರುವ ಅನುದಾನ ಕಡಿತಗೊಳ್ಳುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಬಜೆಟ್‌ನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಯೋಜನೆಗೆ ಒತ್ತು ನೀಡಬೇಕು, ಬೀದಿ ಬದಿ ವ್ಯಾಪಾರಸ್ಥರಿಗೆ ನನ್ನ ಅವಧಿಯಲ್ಲಿ ಗುರುತಿನಚೀಟಿ ನೀಡಲಾಗಿದೆ. ಅವರಿಗೆ ನಾಲ್ಮ್ ಯೋಜನೆಯಡಿ 10 ಸಾವಿರ ರೂ. ಸಾಲ ಕೋಡಲು ಅವಕಾಶ ಮಾಡಬೇಕು ಎಂದರು.

5 ಲಕ್ಷ ಘೋಷಣೆ ಮಾಡಿ: ದಿನಗೂಲಿ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ವಯಸ್ಸಾದ ಮೇಲೆ ಪಿಂಚಣಿ ಇಲ್ಲದೆ ಅತಂತ್ರ ಸ್ಥಿತಿ ತಲುಪಿರುವುದರಿಂದ ಕನಿಷ್ಠ 5 ಲಕ್ಷ ರೂ. ನೀಡಲು ಬಜೆಟ್‌ನಲ್ಲಿ ಯೋಜನೆ ಸೇರಿಸಬೇಕು ಎಂದರು. ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಬೇಕು. ಕ್ರೀಡಾಪಟುಗಳನ್ನು ಉತ್ತೇಜನ ನೀಡಲು ಬಜೆಟ್ ನಲ್ಲಿ ಹಣ ಮೀಸಲಿರಿಸಬೇಕು, ಹಳೇ ಬಸ್ ನಿಲ್ದಾಣದ ಬಳಿ ನಗರಸಭೆಗೆ ಸೇರಿದ ಖಾಲಿ ಜಾಗದಲ್ಲಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸುವಂತೆ ಸಾರಿಗೆ ನಗರದ ಅಂಬರೀಷ ತಿಳಿಸಿದರು.

ಪರಿಸರವಾದಿ ಕೆ.ಎನ್.ತ್ಯಾಗರಾಜ್ ಮಾತನಾಡಿ, ಬಯೋ ಡೈವರ್‌ಸಿಟಿ ಯೋಜನೆ ಮೂಲಕ ಆದಾಯ ಕ್ರೋಡೀಕರಿಸಬಹುದು, ಆಸ್ತಿ ತೆರಿಗೆ ಪರಿಷ್ಕರಿಸಿದಲ್ಲಿ ಮೂಲ ಸೌಕರ್ಯಕ್ಕೆ ಹಣ ಒದಗಿಸಬಹುದೆಂದರು. ವರ್ತಕರ ಸಂಘದ ಪ್ರತಿನಿಧಿ ಮನೋಹರ್ ಮಾತನಾಡಿ, ಸ್ಮಶಾನಗಳ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣಕ್ಕೆ ಸೂಚಿಸಿದರೆ, ಪಿಸಿ ಬಡಾವಣೆಯ ರಾಜೇಶ್ ಸಿಬ್ಬಂದಿ ಕೊರತೆ ನಿವಾರಣೆಯಾದರೆ ಆದಾಯ ತಾನಗಿಯೇ ಹೆಚ್ಚುತ್ತದೆ ಎಂದರು.

ನಗರಸಭೆ ನಿಧಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ, ಅದಾಯ ಹೆಚ್ಚಿಸಲು ಗಮನ ಹರಿಸಬೇಕು, ನಿವಾಸಿಗಳಿಗೆ ಸಂಬಂಧಿಸಿದ ಆಸ್ತಿ ಖಾತೆ, ಇ-ಖಾತೆ ದಾಖಲೆ ಮಾಡಿಕೊಡದಿರುವುದು ತೆರಿಗೆ ವಸೂಲಿ ಕುಂಠಿತವಾಗಲು ಕಾರಣವಾಗಿರುವುದರಿಂದ ಆದಾಯ ವೃದ್ಧಿಗೆ ಕ್ರಮವಹಿಸಿ. ಎಸ್.ಆರ್.ಮುರಳಿಗೌಡ, ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net