ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ

20230623_121326
Published on

ಉಡುಪಿ : ವಿದ್ಯಾರ್ಥಿನಿ ನಿಖಿತಾ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು. ಈ ಬಗ್ಗೆ ಜಿಲ್ಲಾ ಪೋಲಿಸ್ ಹೆಚ್ಚುವರಿ ಅಧೀಕ್ಷಕರು, ಜಿಲ್ಲಾ ಆರೋಗ್ಯ ಅಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿಯವರಿಗೆ ಮನವಿ ನೀಡಲಾಗಿದೆ. ಮೃತ ಕುಟುಂಬಕ್ಕೆ  ಆಸ್ಪತ್ರೆಯ ವತಿಯಿಂದ ಪರಿಹಾರವನ್ನು ನೀಡಬೇಕು. ವಾರದೊಳಗೆ ಪರಿಹಾರ ನೀಡದಿದ್ದಲ್ಲಿ ರಾಜ್ಯದಾದ್ಯಂತ ಎಬಿವಿಪಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು  ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್ ಕೊಯಿಲ ಹೇಳಿದರು.


  ಶುಕ್ರವಾರ ನಗರದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಮೃತಪಟ್ಟ ವಿದ್ಯಾರ್ಥಿನಿ ನಿಖಿತಾ  ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಸ್ಪತ್ರೆ ಸಮೀಪ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.


ಕುಂಬಾರ ಗುಡಿಕೈಗಾರಿಕಾ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಮಾತನಾಡಿ, ನಿಖಿತಾ ಮೃತಪಟ್ಟ ಸಂದರ್ಭದಲ್ಲಿ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಆಸ್ಪತ್ರೆ ನಡವಳಿಕೆ ಅನುಮಾನಾಸ್ಪದವಾಗಿದೆ. ಹೀಗಾಗಿ ಸೂಕ್ತ ತನಿಖೆ ನಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಹೇಳಿದರು.


ವೈದ್ಯರು ಸ್ಥಳಕ್ಕೆ ಬರುವಂತೆ ಪಟ್ಟು
ಬೆಳಗ್ಗೆ 12 ಗಂಟೆಗೆ ನೂರಾರು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ, ಆಸ್ಪತ್ರೆಗೆ ತೆರಳಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಆಸ್ಪತ್ರೆಯ ಸಮೀಪವೇ ಪೋಲಿಸರು ಬ್ಯಾರಿಕೇಡ್ ಹಾಕಿ ತಡೆದು ನಿಲ್ಲಿಸಿದರು. ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿಯುವ ಮಳೆಯನ್ನು ಲೆಕ್ಕಿಸದೇ ವಿದ್ಯಾರ್ಥಿಗಳು ರಸ್ತೆಯಲ್ಲಿಯೇ ಕುಳಿತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ ವೈದ್ಯೆ ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.
ಎಬಿವಿಪಿ ಹಿರಿಯ ಮುಖಂಡ ಡಾ.ಶಿವಾನಂದ ನಾಯಕ್ ವೈದ್ಯರ ಪರವಾಗಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರಾದರೂ, ವಿದ್ಯಾರ್ಥಿಗಳು ಪಟ್ಟು ಬಿಡದ ಕಾರಣ ಪ್ರತಿಭಟನಾ ಸ್ಥಳಕ್ಕೆ ವೈದ್ಯರು ಆಗಮಿಸಿ, ಮೃತ ವಿದ್ಯಾರ್ಥಿನಿಗೆ ನೀಡಿದ ಚಿಕಿತ್ಸೆಯ ಕುರಿತಾಗಿ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸಿಟಿ ಆಸ್ಪತ್ರೆ ಸರ್ಜನ್ ಡಾ. ರಾಮಚಂದ್ರ,  ನಿಕಿತಾ ಅವರು ಹೊಟ್ಟೆ ನೋವು ಹಾಗೂ ಹೊಟ್ಟೆ ಉಬ್ಬರ ಎಂಬುದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ರಕ್ತ ಪರೀಕ್ಷೆ, ಸಿಟಿ ಸ್ಕ್ಯಾನ್ ತಪಾಸಣೆಗಳನ್ನು ನಡೆಸಿದಾಗ ಕರುಳಿನಲ್ಲಿ ಇನ್ಫೆಕ್ಷನ್ ಆಗಿರುವುದು ಕಂಡು ಬಂದಿದೆ. ನಂತರ ಲೆಪೋಸ್ಕೋಪಿ ಆಪರೇಷನ್ ಮಾಡಲು ನಿರ್ಧಾರಿಸಲಾಯಿತು. ಶಸ್ತ್ರ ಚಿಕಿತ್ಸೆ ಬಳಿಕವೂ ಕೂಡ ಅವರು ತಾಯಿ ಜೊತೆಗೆ ಮಾತನಾಡಿದ್ದಾರೆ. ಮರುದಿನ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತಾ ಬಂದಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದರು.


ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಸ್ಥಳಕ್ಕೆ ಆಗಮಿಸಿ ಭದ್ರತೆಯ ಕುರಿತಾಗಿ ಪೋಲಿಸರಿಗೆ ಮಾರ್ಗದರ್ಶನ ನೀಡಿದರು. ಉಡುಪಿ ಡಿವೈಎಸ್ಪಿ ದಿನಕರ್ ಅವರ ನೇತೃತ್ವದಲ್ಲಿ ಬಿಗು ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net