

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರು ನಗರ ಜಿಲ್ಲೆಯ ಯುವಜನರಲ್ಲಿ ಶಾಸ್ತ್ರೀಯ ಕಲೆ, ಜಾನಪದ ಕಲೆ, ಸಂಗೀತ ಮತ್ತು ಸಂಸ್ಕೃತಿಯ ಬಗೆಗಿನ ಕಾಳಜಿ ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಸೆ.17ರಂದು ಯವನಿಕ ಸಭಾಂಗಣದಲ್ಲಿ 2024-25ನೇ ಸಾಲಿನ ಯುವಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಯುವಜನೋತ್ಸವದಲ್ಲಿ 15ರಿಂದ 29 ವರ್ಷದ ವಯೋಮಾನದವರಿಗಾಗಿ ವಿಷಯಾಧಾರಿತ ಸ್ಪರ್ಧೆಗಳು, ಜನಪದ ಗೀತೆ, ಜನಪದ ನೃತ್ಯ, ಕವಿತೆ ಬರೆಯುವುದು, ಕಥೆ ಬರೆಯುವುದು (ವೈಯಕ್ತಿಕ), ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 3,000 ರೂ., ದ್ವಿತೀಯ ರೂ. 2,000 ರೂ. ಹಾಗೂ ಗುಂಪು ಸ್ಪರ್ಧೆಗಳಿಗೆ ಪ್ರಥಮ ಬಹುಮಾನ 15,000, ದ್ವಿತೀಯ 10,000 ರೂ. ನೀಡಲಾಗುತ್ತದೆ. ಸ್ಪರ್ಧೆಗೆ ಉಚಿತ ಪ್ರವೇಶವಿರುತ್ತದೆ.
ಆಸಕ್ತರು ಪ್ರವೇಶ ಪತ್ರ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಕೊಠಡಿ ಸಂಖ್ಯೆ 17 ಹಾಗೂ 18, ಶ್ರೀಕಂಠೀರವ ಕ್ರೀಡಾ ಸಂಕೀರ್ಣ, ಕಸ್ತೂರಬಾ ರಸ್ತೆ, ಬೆಂಗಳೂರು 560001 ಇಲ್ಲಿ ಖುದ್ದಾಗಿ ಅಥವಾ ದೂ: 080-22239771 ಗೆ ಸಂಪರ್ಕಿಸಬಹುದು ಎಂದು ನಗರ ಜಿಲ್ಲೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.