ಡೆಂಘೆ, ಚಿಕೂನ್ ಗುನ್ಯಾ ತಡೆಗೆ ನಗರ ಜಿಲ್ಲಾಧಿಕಾರಿ ಸೂಚನೆ

Vijayavani's top news of the day
Published on

ಬೆಂಗಳೂರು: ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಡೆಂಘೆ, ಮಲೇರಿಯಾ, ಚಿಕೂನ್ ಗುನ್ಯಾ ಅಂತಹ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಮುಂಜಾಗ್ರತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ನಗರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ನೀರು ಶೇಖರಣೆಯಾಗುವ ಸ್ಥಳಗಳಾದ ತೆರೆದ ತೊಟ್ಟಿ, ಮೇಲ್ಛಾವಣಿ ಇಲ್ಲದ ತೊಟ್ಟಿ, ಕಿರು ನೀರು ಸರಬರಾಜು ಮಾಡುವಂತಹ ತೊಟ್ಟಿಗಳನ್ನು ಭದ್ರವಾದ ಮುಚ್ಚಳ ಅಥವಾ ಬಟ್ಟೆಯಿಂದ ಮುಚ್ಚಬೇಕು. ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ತೆರೆದ ತೊಟ್ಟಿಗಳಿದ್ದಲ್ಲಿ ಅವುಗಳ ಮೇಲ್ಭಾಗವನ್ನು ಮುಚ್ಚಬೇಕು. ಈ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜನಜಾಗೃತಿ ಮೂಡಿಸಲು ಸೂಚನೆ:

ಸಾಂಕ್ರಾಮಿಕ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಅನುಸರಿಸಬೇಕಾದ ವಿಧಾನಗಳ ಮಾಹಿತಿಯುಳ್ಳ ಕರಪತ್ರ ಹಂಚುವ, ಭಿತ್ತಿಪತ್ರ/ಬ್ಯಾನರ್ ಪ್ರದರ್ಶಿಸುವ, ಮಾಹಿತಿ- ಶಿಕ್ಷಣ-ಸಂವಹನ ಚಟುವಟಿಕೆಗಳ ಮೂಲಕ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಿಸಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವೀಂದ್ರನಾಥ್ ಮೇಟಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶರತ್ ಸೇರಿ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಹಾಜರಿದ್ದರು.

ತುಂಬಾಕು ಸೇವಿಸುವವರ ವಿರುದ್ಧ ದೂರು ದಾಖಲಿಸಿ:

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಹಾಗೂ ತುಂಬಾಕು ಸೇವನೆ ಮಾಡುವವರ ವಿರುದ್ಧ ದೂರು ದಾಖಲಿಸಿ ದಂಡ ವಸೂಲಿ ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ಪ್ರತಿ ತಿಂಗಳು ಸಭೆ ನಡೆಸಿ ವರದಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಬೇಕು. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಭಿತ್ತಿಪತ್ರ, ನಾಮಫಲಕಗಳನ್ನು ಶಾಲಾ-ಕಾಲೇಜು, ಆಸ್ಪತ್ರೆ ಅಂಗಡಿ-ಮುಂಗಟ್ಟು, ಕೈಗಾರಿಕೆ ಸೇರಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿ ಕಟ್ಟಾಜ್ಞೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net