

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಮಂಡ್ಯ ನಗರವನ್ನು ಮದುವಣಗಿತ್ತಿಯಂತೆ ಸಿಂಗಾರಗೊಳಿಸಬೇಕು. ಎಲ್ಲಿ ನೋಡಿದರೂ ಕನ್ನಡದ ಬಾವುಟಗಳು ರಾರಾಜಿಸುವ ಮೂಲಕ ಸಂಪೂರ್ಣ ಕನ್ನಡಮಯವಾಗಿ ಕಂಗೊಳಿಸಬೇಕು ಎಂದು ನಗರ ಅಲಂಕಾರ ಸಮಿತಿ ಅಧ್ಯಕ್ಷರೂ ಆದ ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ನಗರ ಅಲಂಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ರಸ್ತೆ, ವೃತ್ತ ಹಾಗೂ ಮನೆಮನೆಗಳ ಮೇಲೂ ಕನ್ನಡದ ಬಾವುಟ ಹಾರಾಡಬೇಕು. ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಕಾರ್ಯಕ್ರಮಕ್ಕೆ ಡಿ.6 ಅಥವಾ 7ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು ಎಂದರು.
ನಗರದಲ್ಲಿನ ಸುಮಾರು 20 ಸಾವಿರಕ್ಕೂ ಹೆಚ್ಚು ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು. ಈ ತಿಂಗಳೆಲ್ಲ ಕನ್ನಡದ ಬಾವುಟ ಹಾರಾಡಲಿದೆ. ಇನ್ನೂ ಹತ್ತು ದಿನದೊಳಗೆ ನಗರದೆಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಬೇಕು. ಮೆರವಣಿಗೆ ಸಾಗುವ ಮಾರ್ಗದ ವೃತ್ತಗಳನ್ನು ಪುಷ್ಪಾಲಂಕಾರದಿಂದ ಸಿಂಗರಿಸಬೇಕು. ರಸ್ತೆಗಳು ತಳಿರು ತೋರಣದಿಂದ ಕಂಗೊಳಿಸಬೇಕು. ಗೋಡೆಗಳ ಮೇಲೆ ಕೆಂಪು ಹಳದಿ ಬಣ್ಣದ ಚಿತ್ರಾಲಂಕಾರ ಮೂಡಿಸಬೇಕು ಎಂದು ಹೇಳಿದರು.
ನಗರದಲ್ಲಿ ದೀಪಾಲಂಕಾರವನ್ನು ಚೆಸ್ಕಾಂನವರೇ ವಹಿಸಿಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಪ್ರತಿ ಮಳಿಗೆಗಳ ವ್ಯಾಪಾರಸ್ಥರಿಗೆ ಕನ್ನಡದ ಶಾಲು ವಿತರಣೆ ಮಾಡಿ ಸಾಹಿತ್ಯ ಸಮ್ಮೇಳನದ ಕುರಿತು ಪ್ರಚಾರ ಮಾಡುವಂತೆ ಮನವಿ ಮಾಡಬೇಕು. ಈ ಸಂಬಂಧ ನಗರಸಭೆ ವತಿಯಿಂದ ಕರಪತ್ರಗಳನ್ನು ಮುದ್ರಿಸಿ ಹಂಚಬೇಕು. ವ್ಯಾಪಾರಿಗಳು, ಸಾರ್ವಜನಿಕರು ಮನೆಯ ಹಬ್ಬದ ರೀತಿಯಲ್ಲಿ ಸಾಹಿತ್ಯ ಸಮ್ಮೇಳನ ಆಚರಿಸಿದಾಗ ಸಮ್ಮೇಳನ ಯಶಸ್ವಿ ಆಗಲಿದೆ ಎಂದರು.
ಡಿ.18ರಂದು ಶಾಲಾ, ಕಾಲೇಜು ಮಕ್ಕಳಿಂದ ’ಕನ್ನಡಕ್ಕಾಗಿ ಓಟ’ ಎಂಬ ಘೋಷವಾಕ್ಯದೊಂದಿಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗುವುದು. ಗ್ರಾಮ ಪಂಚಾಯತಿ ಕಚೇರಿಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಜತೆಗೆ ಕಟ್ಟಡವನ್ನು ಲೈಟಿಂಗ್‌ನಿಂದ ಸಿಂಗರಿಸುವ ಕೆಲಸವಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮುಡಾ ಅಧ್ಯಕ್ಷ ನಯೀಂ, ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪೌರಾಯುಕ್ತೆ ಪಂಪಶ್ರೀ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್, ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ಕುಮಾರ್ ಇತರರಿದ್ದರು.