

ಮಂಡ್ಯ: ಮಂಡ್ಯ ನಗರಸಭೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬವಾಗದಂತೆ ಮಾಡಿಸಿಕೊಡಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ನಗರಸಭೆಯ ನೂತನ ಅಧ್ಯಕ್ಷ ಎಂ.ವಿ.ಪ್ರಕಾಶ್(ನಾಗೇಶ್) ಹೇಳಿದರು.
ಮಂಡ್ಯ ನಗರವನ್ನು ಸ್ವಚ್ಛ ಮತ್ತು ಸುಂದರ ನಗರವಾಗಿ ಮಾಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಈಗಷ್ಟೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ಸಮಸ್ಯೆಗಳನ್ನು ಅರಿತು, ಅವುಗಳ ನಿವಾರಣೆಗೆ ಕೆಲಸ ಮಾಡಲು ಶ್ರಮಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.
ಸಿಬ್ಬಂದಿ ಕೊರತೆಯ ಪರಿಣಾಮ ನಗರಸಭೆಯಲ್ಲಿ ಜನರಿಗೆ ಅಗತ್ಯ ದಾಖಲೆಗಳ ವಿತರಣೆ ಹಾಗೂ ವಿವಿಧ ಸೇವೆಗಳು ಸಕಾಲದಲ್ಲಿ ದೊರೆಯುತ್ತಿಲ್ಲ. ಈ ಸಮಸ್ಯೆ ಗಮನಕ್ಕೂ ಬಂದಿದೆ. ಕಂದಾಯ, ಇಂಜಿನಿಯರಿಂಗ್ ಹಾಗೂ ಆರೋಗ್ಯ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿದೆ. ಮಾತ್ರವಲ್ಲದೆ ಪೌರಕಾರ್ಮಿಕರ ಕೊರತೆಯೂ ಇದೆ. ಈ ಬಗ್ಗೆ ರಾಜ್ಯಸರ್ಕಾರದ ಗಮನ ಸೆಳೆದು ಸಾಧ್ಯವಾದಷ್ಟು ತ್ವರಿತವಾಗಿ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವಿನ ಜತೆಗೆ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಅದೇ ರೀತಿ ಶಾಸಕ ರವಿಕುಮಾರ್ ಗಣಿಗ ಅವರ ಸಹಕಾರವನ್ನೂ ಕೋರಿದ್ದೇವೆ. ಮಂಡ್ಯ ನಗರದ ಅಭಿವೃದ್ಧಿಗಾಗಿಯೇ ಎಲ್ಲರೂ ಕೆಲಸ ಮಾಡುತ್ತೇವೆ. ಅದನ್ನು ಒಟ್ಟಿಗೆ ಮಾಡೋಣ ಎಂದು ಶಾಸಕರಿಗೆ ತಿಳಿಸಿದ್ದೇನೆ. ಅದಕ್ಕೆ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ನಗರದಲ್ಲಿ ರಸ್ತೆ, ಚರಂಡಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಪಾದಚಾರಿ ಮಾರ್ಗವನ್ನು ಪುನರ್‌ನಿರ್ಮಿಸುವ ಕೆಲಸ ನಡೆಯುತ್ತಿದೆ. ಇದರೊಂದಿಗೆ ಪುಟ್‌ಪಾತ್ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸುವುದರ ಜತೆಗೆ ಶೆಲ್ಟರ್ ಅಳವಡಿಸಿಕೊಡಲಾಗುವುದು. ಬಸ್ ಪ್ರಯಾಣಿಕರ ತಂಗುದಾಣಗಳನ್ನು ನವೀಕರಿಸುವುದು, ಆಟೋ ನಿಲ್ದಾಣಗಳಿಗೆ ಶೆಲ್ಟರ್ ಅಳವಡಿಕೆಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಸದಸ್ಯ ರವಿ ಹಾಜರಿದ್ದರು.
ಸೆ.5ರಂದು ಅಧಿಕಾರ ಸ್ವೀಕಾರ
ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಅಧಿಕೃತವಾಗಿ ಸೆ.5ರಂದು ಅಧಿಕಾರ ಸ್ವೀಕರಿಸಲಾಗುವುದು ಎಂದು ನೂತನ ಅಧ್ಯಕ್ಷ ಎಂ.ವಿ.ಪ್ರಕಾಶ್ ತಿಳಿಸಿದರು.
ಆ.28ರಂದು ನಡೆದ ನಗರಸಭೆ ವರಿಷ್ಠರ ಚುನಾವಣೆಯಲ್ಲಿ 19 ಮತಗಳ ಬಲದೊಂದಿಗೆ ತಾವು ಅಧ್ಯಕ್ಷರಾಗಿ ಹಾಗೂ ಎಂ.ಪಿ.ಅರುಣ್‌ಕುಮಾರ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದೇವೆ. ಆದರೆ, ಅಧಿಕೃತವಾಗಿ ಸೆ.5ರಂದು ವಿಶೇಷ ಪೂಜೆಯೊಂದಿಗೆ ಅಧಿಕಾರ ವಹಿಸಿಕೊಳ್ಳಲಿದ್ದೇವೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಆಡಳಿತ ಚುಕ್ಕಾಣಿ ಹಿಡಿದಿದ್ದರೂ ಎಲ್ಲ 35 ಸದಸ್ಯರನ್ನು ವಿಶ್ವಾಸ ತೆಗೆದುಕೊಂಡು ಹಾಗೂ ಸಹಕಾರದೊಂದಿಗೆ ಕೆಲಸ ಮಾಡುವುದು ನಮ್ಮ ಆಶಯ. ಇದಕ್ಕಾಗಿ ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರ ಬೆಂಬಲ ಕೋರುತ್ತೇವೆ. ಹಾಗೆಯೇ ಸೆ.5ರಂದು ನಡೆಯುವ ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಆಹ್ವಾನಿಸುತ್ತೇವೆ ಎಂದು ಹೇಳಿದರು.