ಪೌರಾಯುಕ್ತರ ವಜಾಕ್ಕೆ ಡಿಸಿಗೆ ಮೊರೆ ನಗರಸಭೆ ಅಧ್ಯಕ್ಷ - ಪೌರಾಯುಕ್ತರ ನಡುವೆ ಸಮನ್ವಯ ಕೊರತೆ

Published on

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರಸಭೆಯಲ್ಲಿ ಇಷ್ಟುದಿನ ಜನಪ್ರತಿನಿಧಿಗಳು ಮತ್ತು ಪೌರಾಯುಕ್ತರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ. ಈ ಮೂಲಕ ನಗರಸಭೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಟಾ ಬಯಲಾಗಿದೆ. ಇದರ ಮಧ್ಯೆ ನಕಲಿ ಖಾತೆಗಳ ವಿಚಾರವೂ ಸಾಕಷ್ಟು ಸದ್ದು ಮಾಡುತ್ತಿದೆ.

ಆಡಳಿತದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಮನ್ವಯತೆ ಬಹುಮುಖ್ಯ.

ಆದರೆ, ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್ ಮತ್ತು ಪೌರಾಯುಕ್ತ ಪುಟ್ಟಸ್ವಾಮಿ ನಡುವೆ ಆರಂಭದಿಂದಲೂ ಸಮನ್ವಯ ಕೊರತೆ ಇತ್ತು. ದಿನ ಕಳೆದಂತೆ ಅದು ಹೆಚ್ಚಾಗಿ ಈಗ ವಿವಿಧ ಆಯಾಮ ಪಡೆದುಕೊಂಡಿದೆ. ಸದ್ಯ, ಅಧ್ಯಕ್ಷರ ಜತೆಗೆ ಹಲವಾರು ಸದಸ್ಯರೂ ಪಕ್ಷಾತೀತವಾಗಿ ಕೈಜೋಡಿಸಿದ್ದು, ಪೌರಾಯುಕ್ತರ ವಜಾಕ್ಕೆ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ. ಪೌರಾಯುಕ್ತರ ವಿರುದ್ಧ ನಕಲಿ ಖಾತೆ ನೀಡಿರುವ ಗಂಭೀರ ಆರೋಪವನ್ನು ಸದಸ್ಯರು ಮಾಡಿದ್ದಾರೆ.

ನಕಲಿ ಖಾತೆ ಆರೋಪ?

ಪೌರಾಯುಕ್ತರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಹಾಗೂ ಜನಪ್ರತಿನಿಧಿಗಳಿಗೆ ಗೌರವ ನೀಡುವುದಿಲ್ಲ. ಇದರೊಂದಿಗೆ, ಖಾತೆ ವಿಚಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳಿದ್ದವು. ಈಗ, ಪೌರಾಯುಕ್ತರ ವಿರುದ್ಧ ನಕಲಿ ಖಾತೆ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ನಗರದ ನಿವಾಸಿಯೊಬ್ಬರ ಸ್ವತ್ತಿಗೆ ಪೌರಾಯುಕ್ತರು ಅನಧಿಕೃತವಾಗಿ ನಕಲಿ ಖಾತೆ ನೀಡಿದ್ದಾರೆ.

ನೋಂದಣಿ ಸಮಯದಲ್ಲಿ ಅದು ನಕಲಿ ಎಂದು ಗೊತ್ತಾಗಿ ಪೌರಾಯುಕ್ತರನ್ನು ವಿಚಾರಿಸಿದಾಗ, ಮೂರುದಿನ ಸಮಯ ಪಡೆದು ಮತ್ತೊಂದು ಖಾತೆ ನೀಡಲಾಗಿದೆ. ಆದರೆ, ಅದು ಸಹ ಅನಧಿಕೃತ ಎಂದು ದೃಢಪಟ್ಟಿದೆ. ಪೌರಾಯುಕ್ತರು ಅನಧಿಕೃತ ಖಾತೆಗಳಿಗೆ ಅಧಿಕೃತ ಎಂದು ನೀಡಿದ್ದಾರೆ ಎನ್ನುವುದು ಹಲವು ಸದಸ್ಯರ ಆರೋಪವಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದು, ಇದರ ಆಧಾರದ ಮೇಲೆ ಪೌರಾಯುಕ್ತರ ವಜಾಕ್ಕೆ ಆಗ್ರಹಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗೆ ದೂರು!

ಪೌರಾಯುಕ್ತರ ವಿರುದ್ಧ ಅಸಮಾಧಾನಗೊಂಡಿರುವ ಸದಸ್ಯರು, ಅವರ ವಿರುದ್ಧ ನಕಲಿ ಖಾತೆ ಅಸ ಪ್ರಯೋಗಿಸುತ್ತಿದ್ದಾರೆ. ಈ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಗೆ ದೂರು ಸಲ್ಲಿಸಿದ್ದು, ಇ-ಖಾತೆ ವಿಚಾರದಲ್ಲಿ ಪೌರಾಯುಕ್ತರು ಅವ್ಯವಹಾರ ನಡೆಸುತ್ತಿದ್ದಾರೆ. ಇದಲ್ಲದೇ ನಕಲಿ ಖಾತೆ ನೀಡಿದ್ದು, ಇದು ಸರ್ಕಾರಿ ನಿಯಮಕ್ಕೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂಬುದು ದೂರಿನ ಸಾರಾಂಶವಾಗಿದೆ. ಇದರೊಂದಿಗೆ, ಈ ವಿಚಾರವನ್ನು ಶಾಸಕ ಎಚ್.ಡಿ. ಕುಮಾರಸ್ವಾಮಿ ಗಮನಕ್ಕೂ ತಂದಿದ್ದಾರೆ.

ಖಾತೆ ಪುರಾಣವೇ ಕಾರಣ!

ನಗರಸಭೆಯಲ್ಲಿ ಪೌರಾಯುಕ್ತರು ಮತ್ತು ಜನಪ್ರತಿನಿಧಿಗಳ ನಡುವಿನ ಸಂಘರ್ಷಕ್ಕೆ ಖಾತೆ ಪುರಾಣವೇ ಕಾರಣ ಎಂಬ ಮಾತುಗಳು ಕೇಳಿಬಂದಿವೆ. ಅಭಿವೃದ್ಧಿ ಪಥದಲ್ಲಿರುವ ನಗರದಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದ್ದು, ಇ-ಖಾತೆ ವಿಚಾರದಲ್ಲಿ ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವುದು ಸಾರ್ವಜನಿಕ ಸತ್ಯವಾಗಿದೆ. ಮಧ್ಯವರ್ತಿಗಳ ನೆರಳಿನಲ್ಲಿ ಇ-ಖಾತೆ ದಂಧೆ ಜೋರಾಗಿ ನಡೆಯುತ್ತಿದೆ.

ಜನಪ್ರತಿನಿಧಿಗಳು ನೀಡುವ ಖಾತೆಗಳನ್ನು ಮಾಡಿಕೊಡದೆ, ದಲ್ಲಾಳಿಗಳು ನೀಡುವ ಖಾತೆಗಳು ಸಲೀಸಾಗಿ ನಡೆಯುತ್ತಿರುವುದು ಕೆಲ ಸದಸ್ಯರ ಕಣ್ಣು ಕೆಂಪಾಗಿಸಿದೆ. ಖಾತೆ ವಿಚಾರವಾಗಿ ಹಣ ಲೂಟಿ ಮಾಡುತ್ತಿರುವುದು ಸಹ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ನಗರಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಪೌರಾಯುಕ್ತರ ನಡುವೆ ಸಂಘರ್ಷಕ್ಕೆ ಖಾತೆ ಪುರಾಣವೇ ಕಾರಣ ಎಂಬ ವಿಚಾರ ನಗರಸಭೆ ಅಂಗಳದಲ್ಲಿಯೇ ಕೇಳಿಬಂದಿದೆ.

ಪೌರಾಯುಕ್ತರ ನಡವಳಿಕೆ ತೀರಾ ಕೆಟ್ಟದಾಗಿದೆ. ಜನಪ್ರತಿನಿಧಿಗಳ ಬಗ್ಗೆ ಕನಿಷ್ಠ ಗೌರವ ಇಲ್ಲ. ಇ-ಖಾತೆ ವಿಚಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ನಕಲಿ ಖಾತೆ ನೀಡಿರುವುದೇ ಅವರ ಭ್ರಷ್ಟಾಚಾರದ ಪರಮಾವಧಿಗೆ ಉದಾಹರಣೆ. ಖಾತೆ ಮಾಡಿಕೊಡಿಸಿಕೊಳ್ಳಬೇಕು ಎಂಬ ಧಾವಂತದಲ್ಲಿರುವ ಸಾರ್ವಜನಿಕರ ಬಳಿ ಹಣ ದೋಚಲಾಗುತ್ತಿದೆ. ಅದಕ್ಕಾಗಿಯೇ ಮಧ್ಯವರ್ತಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕರ ಗಮನಕ್ಕೆ ತಂದಿದ್ದೇವೆ. ಜಿಲ್ಲಾಧಿಕಾರಿ ಕಚೇರಿಗೂ ದೂರು ಸಲ್ಲಿಸಿದ್ದೇವೆ.ಪಿ.ಪ್ರಶಾಂತ್, ನಗರಸಭೆ ಅಧ್ಯಕ್ಷಯಾವುದೇ ಕಾರಣಕ್ಕೂ ನಕಲಿ ಖಾತೆ ನೀಡಿರಲು ಸಾಧ್ಯವೇ ಇಲ್ಲ. ಇದು ನಂಬುವ ವಿಚಾರವೇ ಅಲ್ಲ. ಇದು ನಮ್ಮ ಗಮನಕ್ಕೆ ಸಹ ಬಂದಿದೆ. ಆದರೆ, ಈ ದಾಖಲೆ ಯಾವುದು ಎಂಬುದು ನಮಗೆ ತಿಳಿದಿಲ್ಲ. ಸುಖಾಸುಮ್ಮನೆ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಅನಧಿಕೃತ ನಿವೇಶನಗಳಿಗೆ ಖಾತೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಕೆಲವರು ಷಡ್ಯಂತ್ರ ರೂಪಿಸಿರಬಹುದು.ಪುಟ್ಟಸ್ವಾಮಿ, ಪೌರಾಯುಕ್ತ ನಗರಸಭೆ

ಆತಂಕಕ್ಕೆ ಕಾರಣವಾದ ಅಧ್ಯಕ್ಷರ ವಿಡಿಯೋ

ನಕಲಿ ಖಾತೆ ವಿಚಾರ ನಗರದ ನಿವೇಶನದಾರರ ಆತಂಕಕ್ಕೆ ಕಾರಣವಾಗಿದೆ. ನಮಗೆ ನೀಡಿರುವ ಖಾತೆ ಅಸಲಿಯೋ, ನಕಲಿಯೋ ಎಂಬುದೇ ಇದಕ್ಕೆ ಕಾರಣವಾಗಿದೆ. ಮೊನ್ನೆಯಷ್ಟೇ ನಗರಸಭೆ ಅಧ್ಯಕ್ಷರು ಈ ಕುರಿತು ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ನಗರಸಭೆಯಲ್ಲಿ ನೀಡಿರುವ ನಕಲಿ ಖಾತೆ ಪ್ರದರ್ಶನ ಮಾಡಿ, ನಿಮ್ಮ ಖಾತೆಗಳ ಬಗ್ಗೆ ಪರಿಶೀಲಿಸಿಕೊಳ್ಳಿ ಎಂಬ ಸಂದೇಶ ನೀಡಿದ್ದರು. ಇದು ನಗರದಲ್ಲಿ ಸಾಕಷ್ಟು ಸಂಚಲನ ಸೃಷಿಸಿದೆ. ದಲ್ಲಾಳಿಗಳ ಮೂಲಕ ಹಣ ನೀಡಿ ಖಾತೆ ಪಡೆದುಕೊಂಡಿರುವವರು ಗೊಂದಲಕ್ಕೆ ಸಿಲುಕಿದ್ದಾರೆ. ಅನಧಿಕೃತ ನಿವೇಶನಗಳನ್ನು ಅಧಿಕೃತ ಎಂದು ನಕಲಿ ದಾಖಲೆ ಬಳಸಿ ಮಾರಾಟ ಸಹ ಮಾಡಲಾಗಿದೆ. ಅನಧಿಕೃತ ನಿವೇಶನಕ್ಕೆ ದುಬಾರಿ ಬೆಲೆ ನೀಡಿ ಖರೀದಿಸಿರುವವರು ಸಹ ಶಾಕ್‌ಗೆ ಒಳಗಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net