ಬೇಸಿಗೆ ನೀಗಿಸಲು ನಗರಸಭೆ ಸನ್ನದ್ಧ

City council is ready to spend the summer
ರಬಕವಿ-ಬನಹಟ್ಟಿ ಸಮೀಪದ ಮಹಿಷವಾಡಗಿ ಬ್ಯಾರೇಜ್‌ಗೆ ಬೆಳಗಾವಿ ವಿಭಾಗದ ಯೋಜನಾಧಿಕಾರಿ ವಿಜಯ ಮೆಕ್ಕಳಕಿ ಭೇಟಿ ನೀಡಿ ವೀಕ್ಷಿಸಿದರು. ಬಿ.ವೈ. ಸುರಕುಡ, ಪೌರಾಯುಕ್ತ ಜಗದೀಶ ಈಟಿ ಇದ್ದರು.
Published on

ರಬಕವಿ/ಬನಹಟ್ಟಿ: ಬೇಸಿಗೆ ಶುರುವಾಗುತ್ತಿದ್ದಂತೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆಯೇ ಸವಾಲಾಗುತ್ತಿದೆ. ಮುಂದಿನ 15 ದಿನ ಬನಹಟ್ಟಿ ಹಾಗೂ 8 ದಿನ ರಬಕವಿ ಪಟ್ಟಣಕ್ಕೆ ಕೃಷ್ಣಾ ನದಿ ನೀರು ಪೂರೈಕೆಯಾಗಲಿದೆ. ಬೇಸಿಗೆ ದಿನಗಳಲ್ಲಿ ನೀರು ಒದಗಿಸುವಲ್ಲಿ ನಗರಸಭೆ ಸನ್ನದ್ಧವಾಗಿದೆ ಎಂದು ಪೌರಾಯುಕ್ತ ಜಗದೀಶ ಈಟಿ ತಿಳಿಸಿದರು.

ಸಮೀಪದ ಕೃಷ್ಣಾ ನದಿಯಲ್ಲಿನ ರಬಕವಿ ಹಾಗೂ ಬನಹಟ್ಟಿ ಜಾಕ್‌ವೆಲ್‌ಗಳಿಗೆ ಭೇಟಿ ನೀಡಿ ನೀರಿನ ಸರಬರಾಜು ಬಗ್ಗೆ ಪರಿಶೀಲನೆ ನಡೆಸಿ ಪತ್ರಿಕೆ ಪ್ರತಿನಿಧಿಯೊಂದಿಗೆ ಅವರು ಮಾತನಾಡಿದರು.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಆಗಾಗ್ಗೆ ನೀರಿನ ಸಮಸ್ಯೆ ತಲೆದೋರುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಗುರುತಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬೇಸಿಗೆಯಲ್ಲಿ ದಿನ ಬೆಳಗಾಗುತ್ತಿದ್ದಂತೆ ನೀರಿನ ಭವಣೆ ತೀರಾ ಇತ್ತು. ಇದೀಗ ಅವೆಲ್ಲವುಗಳಿಗೆ ತಿಲಾಂಜಲಿಯಿಟ್ಟು, ಅಂದಾಜು 12 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 20 ಕಡೆಗಳಲ್ಲಿ ಖಾಸಗಿ ಘಟಕಗಳೂ ನೀರು ಒದಗಿಸುತ್ತಿವೆ. 26 ತೆರೆದ ಬಾವಿಗಳಿದ್ದು, 328 ಕೊಳವೆ ಬಾವಿಗಳಿವೆ. ಇವುಗಳನ್ನು ನಗರಸಭೆ ತನ್ನ ಸುಪರ್ದಿಯಲ್ಲಿಟ್ಟುಕೊಂಡು ಎಲ್ಲ 31 ವಾರ್ಡ್‌ಗಳ ಜನತೆಗೆ ನೀರು ಒದಗಿಸುವಲ್ಲಿ ಸಿಬ್ಬಂದಿ ತಯಾರಿಯಲ್ಲಿದ್ದಾರೆ. ಪ್ರಸಕ್ತ ವರ್ಷ ಮತ್ತೇ 15 ಹೊಸ ಕೊಳವೆ ಬಾವಿಗಳನ್ನು ಕೊರೆಸುವ ವ್ಯವಸ್ಥೆಯಲ್ಲಿದ್ದು, ಅವಶ್ಯವಿರುವ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಯಲಾಗುವುದೆಂದು ಪೌರಾಯುಕ್ತ ಈಟಿ ಸ್ಪಷ್ಟಪಡಿಸಿದರು.

ನದಿ ಪಾತ್ರಕ್ಕೆ ಭೇಟಿ

ಸಮೀಪದ ಕೃಷ್ಣಾ ನದಿಯ ಮಹಿಷವಾಡಗಿ ಬ್ಯಾರೇಜ್‌ನ್ನು ಬೆಳಗಾವಿ ವಿಭಾಗದ ಯೋಜನಾಧಿಕಾರಿ ವಿಜಯ ಮೆಕ್ಕಳಕಿ, ಬಿ.ವೈ. ಸುರಕುಡ, ಅಭಿಯಂತರ ಎಸ್.ಎಸ್. ಹೇರಲಗಿ, ರಾಘವೇಂದ್ರ ಕುಲಕರ್ಣಿ, ವೈಶಾಲಿ ಹಿಪ್ಪರಗಿ ಸೇರಿ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net