

ಕೊಪ್ಪಳ: ಯುವಕರು ದೇಶದ ಸಂಪತ್ತು. ಯುವಜನರು ಸನ್ಮಾರ್ಗದಲ್ಲಿ ನಡೆದು ಕ್ರಿಯಾಶೀಲರಾಗಿ ಸಮಾಜ ಸೇವೆಯಲ್ಲಿ ತೊಡಗಬೇಕು ಎಂದು ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ವಾರ್ತಾ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನೆಮ್ಮದಿ, ಆರೋಗ್ಯ ಹಾಳು ಮಾಡುವ ಮದ್ಯಪಾನ, ಮಾದಕ ವಸ್ತುಗಳ ಬಳಕೆಯಿಂದ ದೂರವಿರಬೇಕು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿ ಅನೇಕ ರೋಗಗಳು ಬರುತ್ತವೆ. ಈ ಬಗ್ಗೆ ಯುವ ಜನತೆ ಅರಿಯಬೇಕು. ವ್ಯಸನಮುಕ್ತರಾಗಿ ಬಾಳಬೇಕೆಂದು ಮನವಿ ಮಾಡಿರು.
ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ನಮ್ಮ ನಾಡಿನಲ್ಲಿ ಸಮಾಜೋದ್ಧಾರಕ್ಕಾಗಿ ಅನೇಕ ಚಳವಳಿಗಳು ನಡೆದಿವೆ. ಈ ಸಾಲಿಗೆ ಮಹಾಂತ ಜೋಳಿಗೆ ವ್ಯಸನಮುಕ್ತ ಆಂದೋಲನ ಸಹ ಸೇರಿದೆ. ಶರಣರ ಜನ್ಮ ದಿನವಾದ ಆ.1ನ್ನು ಸರ್ಕಾರ ವ್ಯಸನಮುಕ್ತ ದಿನ ಎಂದು ಆಚರಿಸುತ್ತಿದೆ ಎಂದರು.
ಮಾನಸಿಕ ರೋಗ ತಜ್ಞ ಡಾ.ವಾದಿರಾಜ ಗೊರೆಬಾಳ, ನಿವೃತ್ತ ಆಯುಷ್ ಅಧಿಕಾರಿ ಡಾ.ಸಂಗಮೇಶ ಕಲಹಾಳ ಉಪನ್ಯಾಸ ನೀಡಿದರು. ಕಾರ್ಯಕ್ರಮ ಅಂಗವಾಗಿ ಜಾಗೃತಿ ಜಾಥಾ, ಪ್ರತಿಜ್ಞಾವಿಧಿ ಬೋಧನೆ, ವಿಶೇಷ ಉಪನ್ಯಾಸ, ಕರಪತ್ರಗಳ ಬಿಡುಗಡೆ ಮಾಡಲಾಯಿತು. ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಡಳಿತ ಭವನದವರೆಗೆ ಜಾಥಾ ನಡೆಯಿತು.
ಉಪನ್ಯಾಸಕರಾದ ನರಸಿಂಹಮೂರ್ತಿ, ಮಂಜುನಾಥ ಆರೆಂಟನೂರ, ಈಶಪ್ಪ ದೊಡ್ಡಮನಿ, ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದ ಶಾಂತಮ್ಮ ಕಟ್ಟಿಮನಿ, ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಯಮುನಾ ಬೆಸ್ತರ ಇತರರಿದ್ದರು.