ಮೈಸೂರಿನ 2 ಕಡೆ ಫುಡ್‌ಜೋನ್

valmiki road, mysore
Published on

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛತೆಯಲ್ಲಿ ಮತ್ತೆ ದೇಶದ ನಂ.1 ನಗರವಾಗಿ ರೂಪುಗೊಳ್ಳಲು ನಗರ ಪಾಲಿಕೆ ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದ್ದು, ಅದರ ಒಂದು ಭಾಗವಾಗಿ ಎರಡು ಕಡೆಗಳಲ್ಲಿ ಫುಡ್‌ಜೋನ್ ನಿರ್ಮಾಣ ಮಾಡಲು ಪಾಲಿಕೆ ನಿರ್ಧರಿಸಿದೆ.

ನಗರದ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಮೈದಾನದ ಮುಂಭಾಗ ಹಾಗೂ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯಲ್ಲಿ ಫುಡ್‌ಜೋನ್ ನಿರ್ಮಾಣ ಮಾಡಲು ಪಾಲಿಕೆ ಸಿದ್ಧತೆ ಕೈಗೊಂಡಿದೆ. ನಗರದ ಬಲ್ಲಾಳ್ ವೃತ್ತದ ಬಳಿಯ ರಸ್ತೆಯಲ್ಲಿ ಹಲವು ವರ್ಷಗಳ ಹಿಂದೆ ಫುಡ್‌ಜೋನ್ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ನೂತನ ಎರಡು ಸ್ಥಳಗಳಲ್ಲಿ ಫುಡ್ ಜೋನ್ ನಿರ್ಮಾಣವಾಗಲಿದೆ.

ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಫುಟ್ಪಾತ್ ವ್ಯಾಪಾರ ಹೆಚ್ಚಾಗುತ್ತಿದ್ದು, ಎಲ್ಲೆಂದರಲ್ಲಿ ತಳ್ಳುಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ. ತಳ್ಳುಗಾಡಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. ಇದು ನಗರದ ಸಹಜ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಫುಟ್ಪಾತ್ ವ್ಯಾಪಾರಕ್ಕೆ ಕಡಿವಾಣ ಹಾಕಲು ನಗರ ಪಾಲಿಕೆ 2 ಕಡೆಗಳಲ್ಲಿ ಫುಡ್‌ಜೋನ್ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರೆತರೆ ಮತ್ತಷ್ಟು ಉತ್ತಮ ಜಾಗಗಳನ್ನು ಗುರುತಿಸಿ ಫುಡ್‌ಜೋನ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಶುಚಿತ್ವಕ್ಕೆ ಆದ್ಯತೆ

ಬಹುತೇಕ ಫುಟ್ಪಾತ್ ವ್ಯಾಪಾರದ ಸ್ಥಳಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಫುಡ್‌ಜೋನ್ ನಿರ್ಮಾಣವಾದರೆ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರಸ್ತುತ ಫುಟ್ಪಾತ್ ವ್ಯಾಪಾರದ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕೈ ತೊಳೆಯಲು ಸೂಕ್ತ ವ್ಯವಸ್ಥೆ ಇಲ್ಲ. ಅಲ್ಲದೆ, ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆಗಳು ಇಲ್ಲ. ನೀರಿನ ವ್ಯವಸ್ಥೆ ಇಲ್ಲದೆ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು ಆಗುತ್ತಿಲ್ಲ. ಕೆಲವು ಕಡೆಗಳಲ್ಲಿ ನೀರಿನ ಕೊರತೆಯಿಂದ ತಟ್ಟೆಗಳನ್ನು ಸರಿಯಾಗಿ ತೊಳೆಯುತ್ತಿಲ್ಲ. ಇದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ವ್ಯಾಪಾರ ವಹಿವಾಟು ಮುಗಿದ ನಂತರ ಕೆಲವು ಬೀದಿಬದಿ ವ್ಯಾಪಾರಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ನಗರದ ಪರಿಸರ ಹಾಳಾಗುತ್ತಿದ್ದು, ಮೈಸೂರಿಗೆ ಸ್ವಚ್ಛತೆಯಲ್ಲಿ ನಂ.1 ಸ್ಥಾನ ಪಡೆಯಲು ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಅಶುಚಿತ್ವಕ್ಕೆ ಕಡಿವಾಣ ಹಾಕಲು ನಗರ ಪಾಲಿಕೆ ಫುಡ್‌ಜೋನ್ ನಿರ್ಮಾಣಕ್ಕೆ ಮುಂದಾಗಿದ್ದು, ಫುಡ್‌ಜೋನ್‌ಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ನಗರ ಪಾಲಿಕೆ ಕಲ್ಪಿಸಲಿದೆ. ಅಲ್ಲದೆ, ಇಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ತಕ್ಷಣ ವಿಲೇವಾರಿ ಮಾಡಲು ಪಾಲಿಕೆಯಿಂದ ಪ್ರತ್ಯೇಕ ಪೌರ ಕಾರ್ಮಿಕರ ತಂಡ ರಚಿಸಲಾಗುವುದು.

ಫುಟ್ಪಾತ್ ತೆರವು ಕಾರ್ಯಾಚರಣೆ

ಫುಟ್ಪಾತ್ ವ್ಯಾಪಾರದ ಮೂಲಕ ಬದುಕು ಕಟ್ಟಿಕೊಳ್ಳಲು ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಫುಟ್ಪಾತ್ ವ್ಯಾಪಾರ ಹೆಚ್ಚುತ್ತಿದೆ. ಫುಟ್ಪಾತ್ ವ್ಯಾಪಾರ ಹೆಚ್ಚುತ್ತಿದ್ದಂತೆಯೇ ನಗರದ ಸಹಜ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಸಾಕಷ್ಟು ವರ್ಷಗಳಿಂದ ಫುಟ್ಪಾತ್‌ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರನ್ನು ಗುರುತಿಸಿ ನಗರ ಪಾಲಿಕೆಯು ಗುರುತಿನ ಚೀಟಿ ನೀಡಿದೆ. ಆದರೆ, ನಗರದಲ್ಲಿ ಗುರುತಿನ ಚೀಟಿ ಪಡೆಯದೆ ಫುಟ್ಪಾತ್‌ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರ ಸಂಖ್ಯೆಯೇ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಫುಟ್ಪಾತ್ ವ್ಯಾಪಾರಕ್ಕೆ ಕಡಿವಾಣ ಹಾಕಲು ನಗರ ಪಾಲಿಕೆಯು ಅನಧಿಕೃತ ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಲು ಸೋಮವಾರ ತೆರವು ಕಾರ್ಯಾಚರಣೆ ಹಮ್ಮಿಕೊಂಡಿದೆ. ಒಮ್ಮೆ ತೆರವುಗೊಳಿಸಿದ ನಂತರ ಆ ಜಾಗದಲ್ಲಿ ಮತ್ತೆ ಫುಟ್ಪಾತ್ ವ್ಯಾಪಾರಕ್ಕೆ ಅವಕಾಶ ನೀಡದೆ ಇರಲು ಪಾಲಿಕೆ ನಿರ್ಧರಿಸಿದೆ. ಫುಟ್ಪಾತ್ ವ್ಯಾಪಾರದಿಂದ ಪಾದಚಾರಿಗಳು ರಸ್ತೆಯಲ್ಲಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜ ನಿಕರು ಹಾಗೂ ನಗರ ಪಾಲಿಕೆಯಿಂದ ಕೇಳಿ ಬಂದಿದೆ.

ಈ ಹಿಂದೆ ಕೃಷ್ಣವಿಲಾಸ ರಸ್ತೆಯಲ್ಲಿ ಫುಟ್ಪಾತ್ ವ್ಯಾಪಾರ ದೊಡ್ಡ ಪ್ರಮಾಣದಲ್ಲಿ ನಡೆಯುತಿತ್ತು. ಈ ರಸ್ತೆ ಫುಟ್ಪಾತ್ ವ್ಯಾಪಾರಕ್ಕೆ ಹೆಸರು ವಾಸಿಯಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅಲ್ಲದೆ, ನಗರದ ಸಹಜ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಂಡು ಪ್ರಸ್ತುತ ಸದರಿ ರಸ್ತೆಯಲ್ಲಿ ಯಾರಿಗೂ ರಸ್ತೆ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿಲ್ಲ. ಇದೇ ರೀತಿ ನಗರದ ಪ್ರಮುಖ ರಸ್ತೆಗಳಲ್ಲಿ ಜನರ ಸಂಚಾರಕ್ಕೆ ಹಾಗೂ ನಗರದ ಸಹಜ ಸೌಂದರ್ಯಕ್ಕೆ ಧಕ್ಕೆಯಾಗುವ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆಗೆ ಪಾಲಿಕೆ ನಿರ್ಧರಿಸಿದೆ.

ನಗರದ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಮೈದಾನದ ಮುಂಭಾಗ ಹಾಗೂ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯಲ್ಲಿ ಫುಡ್ ಜೋನ್ ನಿರ್ಮಾಣ ಮಾಡಲು ಶೀಘ್ರದಲ್ಲಿಯೇ ಕ್ರಮ ವಹಿಸಲಾಗುವುದು. ಫುಡ್ ಜೋನ್‌ನಲ್ಲಿ ಫುಟ್ಪಾತ್ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಫುಡ್ ಜೋನ್ ನಿರ್ಮಾಣವಾದ ನಂತರ ಎಲ್ಲೆಂದರಲ್ಲಿ ಫುಟ್ಪಾತ್ ವ್ಯಾಪಾರಕ್ಕೆ ಕಡಿವಾಣ ಹಾಕಲಾಗುವುದು. ಆ ಮೂಲಕ ನಗರದ ಸಹಜ ಸೌಂದರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕ್ರಮ ವಹಿಸಲಾ ಗುವುದು.
ಶಿವಕುಮಾರ್, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net