

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ನಗರ ಸ್ವಚ್ಛತೆಯಲ್ಲಿ ಇವರದ್ದೇ ಸಿಂಹಪಾಲು.. ಆದರೂ ಇವರಿಗಿಲ್ಲ ಸೂಕ್ತ ಭದ್ರತೆ.. ಹೌದು ಎಲ್ಲೆಂದರಲ್ಲಿ ಬಿದ್ದ ಕಸವನ್ನು ತೆಗೆದು ಶುಚಿತ್ವ ಕಾಪಾಡುವ ಇಂತಹವರ ಬದುಕು ಮೂರಾಬಟ್ಟೆಯಾಗಿದೆ.
ನಗರದ 31 ವಾರ್ಡ್‌ಗಳಲ್ಲಿ ಪ್ರತಿದಿನ ಸಂಗ್ರಹವಾಗುವ ಟನ್‌ಗಟ್ಟಲೆ ಕಸವನ್ನು ಬಳ್ಳಾರಿ ರಸ್ತೆಯ ಕಸ ವಿಲೇವಾರಿ ಘಟಕಕ್ಕೆ ಸುರಿಯಲಾಗುತ್ತಿದೆ.
ಇಲ್ಲಿನ ಸರ್ಕಾರಿ ಗೋಮಾಳದ ಜಮೀನಿನ 10 ಎಕರೆ ವ್ಯಾಪ್ತಿಯಲ್ಲಿ ಶೆಡ್ ನಿರ್ಮಿಸಲಾಗಿದ್ದು, ಕಸ ವಿಂಗಡಣೆಗೆ ಮತ್ತು ಕಸವನ್ನು ಗೊಬ್ಬರ ಮಾಡಲು ಲಕ್ಷಾಂತರ ರೂ.ಬೆಲೆ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.
ಸ್ವಚ್ಛತೆ ನಿರ್ವಹಣೆಗೆ 4 ಟ್ರ್ಯಾಕ್ಟರ್, 2 ಡೆಂಪರ್ ಬಾಕ್ಸ್ ವಾಹನ, 9 ಟಾಟಾ ಎಸಿ, ಮೂರು ಜೀಪುಗಳು ದಿನಕ್ಕೆ ಐದಾರು ಬಾರಿ ಕಸ ಸಂಗ್ರಹಿಸಿ ಡಂಪಿಂಗ್ ಯಾರ್ಡ್‌ಗೆ ತಂದು ಸುರಿಯುತ್ತಿವೆ.
ಇಲ್ಲಿ ರಾಶಿಗಟ್ಟಲೇ ಬೀಳುತ್ತಿರುವ ಕಸವನ್ನು ಹಸಿ-ಒಣ ಕಸ ವಿಂಗಡಿಸಲು ಹೊರ ರಾಜ್ಯದ ಶ್ರಮಿಕರನ್ನು ಬಳಸಿಕೊಳ್ಳುತ್ತಿದ್ದು ಅವರ ಬದುಕು ಶೋಚನೀಯವಾಗಿದೆ.
ಕಸ ನಿರ್ವಹಣೆಯಲ್ಲಿ ಕೆಲಸ ಮಾಡುವವರ ಸುರಕ್ಷತೆಗೆ ಸಮವಸ್ತ್ರ ಮತ್ತು ರಕ್ಷಣಾ ಸಾಮಗ್ರಿಗಳಿಲ್ಲ. ಸುರಕ್ಷಿತ ವಾಸದ ಕೊಠಡಿಗಳು ಮೊದಲೇ ಇಲ್ಲ. ಆರೋಗ್ಯ ತಪಾಸಣಾ ವ್ಯವಸ್ಥೆ ಇಲ್ಲ.
ನಗರಸಭಾ ಆಡಳಿತ ವ್ಯವಸ್ಥೆಗೆ ಇವರ‌್ಯಾರು ಒಳಪಡದೆ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಅಸ್ಸಾಂ ರಾಜ್ಯದ ಐದಾರು ಕುಟುಂಬಗಳು ಇಲ್ಲಿ ವಾಸವಾಗಿವೆ. ಇರುವ 20 ಜನರ ಪೈಕಿ 10 ಅಪ್ರಾಪ್ತ ಮಕ್ಕಳು ಕಸ ವಿಂಗಡಣೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಕಸದ ರಾಶಿಗೆ ಇಳಿದು ಹಸಿಕಸ-ಒಣಕಸ ಬೇರ್ಪಡಿಸುವುದು. ಪೇಪರ್, ರಟ್ಟು, ಬಟ್ಟೆ, ಕಬ್ಬಿಣ ವಿಭಜಿಸಿ ಪ್ರತ್ಯೇಕಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ತ್ಯಾಜ್ಯ ಸಂಗ್ರಹ ಸ್ಥಳದಲ್ಲಿ ಅಪ್ರಾಪ್ತ ಮಕ್ಕಳು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರರಾದ ಎಸ್.ಎಚ್. ಸೈಯದ್, ನೇತಾಜಿ ಪ್ರಸನ್ನ, ಎಂ. ಚೇತನ್‌ಕುಮಾರ್ ಆಗ್ರಹಿಸಿದ್ದಾರೆ.
ವಿಲೇವಾರಿ ಘಟಕದಲ್ಲಿ ಕಸ ವಿಂಗಡಣೆ ಕಾರ್ಮಿಕರನ್ನು ಕಾಯಂ ಇಲ್ಲವೆ ಟೆಂಡರ್ ಮೂಲಕ ನೇಮಕ ಮಾಡಿ ಕೊಂಡಿಲ್ಲ. ಇಲ್ಲಿ ಕೆಲಸ ನಿರ್ವಹಣೆಯಲ್ಲಿ ತೊಡಗಿರುವವರಿಗೆ ಸೂಕ್ತ ಭದ್ರತೆ ನೀಡಬೇಕಿದೆ.ಕೆ.ಬಿ.ನರೇಂದ್ರಬಾಬು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆಲ ದಿನಗಳ ಹಿಂದೆ ಕಸ ವಿಲೇವಾರಿ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಅಪಾಯದ ಪರಿಸ್ಥಿತಿಯಲ್ಲಿ ಅಸ್ಸಾಂ ಕುಟುಂಬಗಳು ಕಸ ವಿಂಗಡಣಾ ಕಾರ್ಯದಲ್ಲಿ ತೊಡಗಿವೆ. ಇಲ್ಲಿನ ಶ್ರಮಿಕರ ಭದ್ರತೆಗೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಟಿ.ಮಲ್ಲಿಕಾರ್ಜುನ, ನಗರಸಭೆ ಸದಸ್ಯ