ಸಿಬ್ಬಂದಿಗಳ ಕೊರತೆಯಲ್ಲಿಯೂ ನಗರ ಸ್ವಚ್ಛತೆಗೆ ಆದ್ಯತೆ: ರಮೇಶ್

rotry wods
Published on

ಮಡಿಕೇರಿ; ನಗರಸಭೆಯಲ್ಲಿ ಪೌರಸಿಬ್ಬಂದಿಗಳ ತೀವ್ರ ಕೊರತೆಯ ನಡುವೇ ಇರುವ ಪೌರಸಿಬ್ಬಂದಿಗಳ ಮೂಲಕ ನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಮಡಿಕೇರಿ ನಗರಸಭೆಯ ಪೌರಾಯುಕ್ತ ಎಚ್.ಆರ್.ರಮೇಶ್ ಹೇಳಿದರು.

ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ವತಿಯಿಂದ ಬುಧವಾರ ಆಯೋಜಿತ ಕಾರ್ಯಕ್ರಮದಲ್ಲಿ ಪೌರಸಿಬ್ಬಂದಿಗಳಾದ ಅಹಮ್ಮದ್ ಕಬೀರ್, ಎಚ್.ಆರ್.ಶಂಕರ್, ಈರಪ್ಪ ಶೆಟ್ಟಿ, ವಸಂತ ಕುಮಾರ್, ಬಿ.ಟಿ.ಜಗದೀಶ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಮಡಿಕೇರಿಯಲ್ಲಿ ಸ್ವಚ್ಛತೆ ಸಂಬಂಧಿತ ಜನರಲ್ಲಿ ಹೆಚ್ಚು ಅರಿವು ಮೂಡಿದೆ. ಪೌರಸಿಬ್ಬಂದಿಗಳು ನಗರದ ತ್ಯಾಜ್ಯ ವಿಲೇವಾರಿ ಮಾಡುವ ಪೌರಸಿಬ್ಬಂದಿಗಳ ಆರೋಗ್ಯದ ಬಗ್ಗೆಯೂ ನಗರಸಭೆ ಹೆಚ್ಚಿನ ಕಾಳಜಿ ವಹಿಸಿದೆ. ಪ್ರತೀ ವರ್ಷ ಅತ್ಯುತ್ತಮ ರೀತಿಯಲ್ಲಿ ಪೌರಸಿಬ್ಬಂದಿಗಳ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ. ಅಗತ್ಯವುಳ್ಳವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ ಎಂದೂ ರಮೇಶ್ ನುಡಿದರು.

ಈಗಾಗಲೇ ಮಡಿಕೇರಿಯ ರಾಜರಾಜೇಶ್ವರಿ ಬಡಾವಣೆಯಲ್ಲಿ ಪೌರಸಿಬ್ಬಂದಿಗಳಿಗೆ ೧೨ ಮನೆಗಳನ್ನು ನಿರ್ಮಿಸಿ ಉಚಿತವಾಗಿ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ೭೦೦ ಜನಸಂಖ್ಯೆಗೆ ಒಬ್ಬರಂತೆ ಓರ್ವ ಪೌರಸಿಬ್ಬಂದಿಗಳಿರಬೇಕು. ಆದರೆ, ಈ ಪ್ರಮಾಣವೂ ಮಡಿಕೇರಿಗೆ ಸಾಕಾಗುವುದಿಲ್ಲ ಎನ್ನುವಂತಾಗಿದ ಎಂದು ಹೇಳಿದರು.

ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ದಸರಾ ಸಂದರ್ಭ ಪೌರಸಿಬ್ಬಂದಿಗಳು ಮಡಿಕೇರಿಯನ್ನು ಮಡಿಯಾದ ಕೇರಿಯನ್ನಾಗಿಸುವಲ್ಲಿ ವಹಿಸಿದ ಶ್ರಮ ಶ್ಲಾಘನೀಯ. ಪೌರಸಿಬ್ಬಂದಿಗಳ ಅವಿರತ ಶ್ರಮದಿಂದಾಗಿಯೇ ಮಡಿಕೇರಿ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಪೌರಸಿಬ್ಬಂದಿಗಳನ್ನು ಕಸ ತೆಗೆಯುವ ವ್ಯಕ್ತಿಗಳಾಗಿ ಪರಿಗಣಿಸದೇ ನಮ್ಮ ಮನೆ, ಅಂಗಡಿಗಳಲ್ಲಿರುವ ಕಸವನ್ನು ವಿಲೇವಾರಿ ಮಾಡಿ, ಸಮಾಜವನ್ನು ಸ್ವಚ್ಛವಾಗಿರಿಸುವ ಕಾಯಕಜೀವಿಗಳೆಂದು ಮಾನವೀಯತೆಯಿಂದ ಪರಿಗಣಿಸುವಂತೆಯೂ ಕೋರಿದರು.

ರೋಟರಿ ವುಡ್ಸ್ ಸಲಹೆಗಾರ ಬಿ.ಜಿ.ಅನಂತಶಯನ ಮಾತನಾಡಿ, ಭೂಮಿತಾಯಿಯ ಮಡಿಲಲ್ಲಿ ತ್ಯಾಜ್ಯ ಎಸೆಯುವ ಜನರು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅಂಥ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮೂಲಕ ನಿಸರ್ಗ ಮಾತೆಯನ್ನು ಸ್ವಚ್ಛಗೊಳಿಸುವ ಅಮೂಲ್ಯ ಕಾಯಕದಲ್ಲಿ ಪೌರಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ಎಲ್ಲಿ ಶುದ್ಧ ಹಸ್ತಗಳಿರುತ್ತವೆಯೋ ಅಂಥ ಸಮಾಜ ಸುಂದರವಾಗಿರುತ್ತದೆ. ಆ ಶುದ್ಧ ಹಸ್ತವನ್ನು ಪೌರಸಿಬ್ಬಂದಿಗಳಲ್ಲಿ ಕಾಣಬಹುದಾಗಿದು ಎಂದರು.

ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ರೋಟರಿ ವಲಯ ೬ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ, ವಲಯ ಸೇನಾನಿ ಕಾರ್ಯಪ್ಪ, ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ಸಲಹೆಗಾರ ಮೋಹನ್ ಪ್ರಭು, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ.ಕಾಯಪ್ಪ, ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net