ನಗರ ಬಸ್‌ಗಳಿಗೆ ಇನ್ನು ಜಿಪಿಎಸ್ ವ್ಯವಸ್ಥೆ

29 Jaggu 6 Story Photo-WEb
ಜಿಪಿಎಸ್ ವ್ಯವಸ್ಥೆ ಮೂಲಕ ಬೆಳಗಾವಿ ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳ ಮಾಹಿತಿ ಗೋಚರವಾಗುತ್ತಿರುವುದು.
Published on

ಬೆಳಗಾವಿ: ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ಬಸ್‌ಗಾಗಿ ಕಾಯುವ ಕಿರಿಕಿರಿ ತಪ್ಪಲಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಕಲ್ಪಿಸುವ ದೃಷ್ಟಿಯಿಂದ ಸಾರಿಗೆ ಸಂಸ್ಥೆ ಹಾಗೂ ಸ್ಮಾರ್ಟ್‌ಸಿಟಿ ಕಂಪನಿಯಿಂದ ಸಿಟಿ ಬಸ್‌ಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ.

ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವವರು ಸ್ಮಾರ್ಟ್‌ಸಿಟಿ ಕಂಪನಿಯ ‘ಸಿಟಿಜನ್ ಆ್ಯಪ್’ ಡೌನ್‌ಲೋಡ್ ಮಾಡಿಕೊಂಡರೆ ಬಸ್‌ಗಳು ಎಲ್ಲಿಂದ ಎಷ್ಟು ಗಂಟೆಗೆ ಹೋಗುತ್ತವೆ? ಎಷ್ಟು ಗಂಟೆಗೆ ತಲುಪುತ್ತವೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಈ ಆ್ಯಪ್ ಇದ್ದರೆ ಬಸ್ ನಿಲ್ದಾಣಗಳಲ್ಲಿ ನಿಂತು ಬಸ್ ಬರುವಿಕೆಗಾಗಿ ಕಾಯುವುದು ತಪ್ಪಲಿದೆ.

66 ಬಸ್‌ಗಳಲ್ಲಿ ಅಳವಡಿಕೆ: ಮೊದಲ ಹಂತದಲ್ಲಿ ನಗರ ಸಾರಿಗೆಯ 66 ಬಸ್‌ಗಳಲ್ಲಿ ಜಿಪಿಎಸ್ ಅಳವಡಿಸಲಾಗಿದೆ. ಬೆಳಗಾವಿ ಸ್ಮಾರ್ಟ್‌ಸಿಟಿ ಕಂಪನಿ ಯೋಜನೆಗಳ ಮಾಹಿತಿ, ಕಾಮಗಾರಿಗಳ ವಿಶೇಷತೆ ಕುರಿತಂತೆ ನಾಗರಿಕರಿಗೆ ತಿಳಿದಿರಲಿ ಎಂಬ ಉದ್ದೇಶದಿಂದ ‘ಸಿಟಿಜನ್ ಆ್ಯಪ್’ ಬಿಡುಗಡೆ ಮಾಡಿತ್ತು. ಇದೀಗ ಈ ಆ್ಯಪ್‌ನಲ್ಲಿಯೇ ನಗರದಲ್ಲಿನ ಸಿಟಿ ಬಸ್‌ಗಳ ಸಂಚಾರ ಮಾಹಿತಿ ಹಾಗೂ ಬಸ್‌ಗಳು ಹೊರಡುವ ಸಮಯದ ಮಾಹಿತಿಯನ್ನೂ ಅಳವಡಿಸಲಾಗಿದೆ. ಇದರಿಂದ ಜನರಿಗೆ ಸಮಯ ಉಳಿತಾಯದೊಂದಿಗೆ ತಾವು ಸಂಚರಿಸಲಿರುವ ಬಸ್ ಎಲ್ಲಿದೆ? ಎಷ್ಟು ಗಂಟೆಗೆ ಬರಲಿದೆ? ಎಂಬುವುದನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ನೋಡಬಹುದು.

ಲೈವ್ ಟ್ರ್ಯಾಕಿಂಗ್: ವಿಶ್ವೇಶ್ವರಯ್ಯ ನಗರದಲ್ಲಿರುವ ಸ್ಮಾರ್ಟ್‌ಸಿಟಿ ಕಂಪನಿಯ ‘ಇಂಟಿಗ್ರೇಟೆಡ್ ಕಮಾಂಡ್ ಆ್ಯಂ ಕಂಟ್ರೋಲ್ ಸೆಂಟರ್’ನಿಂದ ಜಿಪಿಎಸ್ ವ್ಯವಸ್ಥೆ ಅಳವಡಿಸಿರುವ ಬಸ್‌ಗಳ ಮೇಲೆ ನಿಗಾ ವಹಿಸಲಾಗುತ್ತದೆ. ಸ್ಮಾರ್ಟ್‌ಸಿಟಿ ಕಂಪನಿಯವರು ಮಹಾನಗರದಲ್ಲಿನ ಸಿಟಿ ಬಸ್‌ಗಳು, ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದ ವಾಹನಗಳ ಸಂಚಾರ ಮಾಹಿತಿ ಪಡೆದುಕೊಂಡು, ಅವುಗಳಿಗೂ ಜಿಪಿಎಸ್ ತಂತ್ರಜ್ಞಾನ ಅಳವಡಿಸಿದ್ದಾರೆ. ಇದರಿಂದಾಗಿ ಇವುಗಳ ‘ಲೈವ್ ಟ್ರ್ಯಾಕಿಂಗ್’ ಸಹ ಸಿಟಿಜನ್ ಆ್ಯಪ್ ಮೂಲಕ ಗೋಚರಿಸುತ್ತದೆ. ಜಿಪಿಎಸ್ ಆಧಾರದ ಮೇಲೆ ಬಸ್‌ಗಳ ನಿಖರ ಮಾಹಿತಿ ಮೊಬೈಲ್‌ನಲ್ಲಿ ದೊರೆಯಲಿದೆ.

ಜಿಪಿಎಸ್ ಮೂಲಕ ಸದ್ಯ ಬಸ್ ಎಲ್ಲಿದೆ? ಎಷ್ಟು ಗಂಟೆಗೆ ನಿಲ್ದಾಣಕ್ಕೆ ಆಗಮಿಸುತ್ತದೆ? ಚಾಲಕ ಎಷ್ಟು ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೆ, ಒಂದು ಕಡೆಯಿಂದ ಮತ್ತೊಂದೆಡೆ ಚಲಿಸಲು ಇನ್ನೂ ಎಷ್ಟು ಸಮಯ ಬೇಕು? ಮುಂದಿನ ನಿಲ್ದಾಣ ಸಹಿತ ಹಲವು ಮಾಹಿತಿ ಆ್ಯಪ್‌ನಲ್ಲಿ ಅಡಕವಾಗಿದೆ.| ಶಶಿಧರ ಕುರೇರ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net