

ಸಂಡೂರು: ಕೇಂದ್ರ-ರಾಜ್ಯ ಸರ್ಕಾರ ದುಡಿಯುವ ಜನರ ಬದುಕನ್ನು ಛಿದ್ರಗೊಳಿಸಲು ಹೊರಟಿವೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಮ್.ಚನ್ನಬಸಯ್ಯ ಆರೋಪಿಸಿದರು.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಅಂಗವಾಗಿ ಪಟ್ಟಣದ ತಾಲೂಕು ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ರತ್ನಗಂಬಳಿ ಹಾಸಿ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ತರಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುಡಿಯುವ ಜನರ ಬದುಕಿನ ಮೇಲೆ ನಡೆಯಲಿರುವ ಪ್ರಹಾರವನ್ನು ವಿರೋಧಿಸಿ ಮೇ 20 ರಂದು ಜೆಸಿಟಿಯು ಜಾಯಿಂಟ್ ಕಮಿಟಿ ಆಫ್ ಟ್ರೇಡ್ ಯೂನಿಯನ್ ಮತ್ತು ಎಸ್‌ಕೆಎಂ ಸಂಯುಕ್ತ ಕಿಸಾನ್ ಮೋರ್ಚಾ ಜಂಟಿ ನೇತೃತ್ವದಲ್ಲಿ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಟ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ಬಿಜೆಪಿ ತಂದಿದ್ದ ನೀತಿಗಳನ್ನೇ ಮುಂದುವರಿಸಿದೆ. ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಕೊಟ್ಟ ಮಾತುಗಳನ್ನೆಲ್ಲಾ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ತಾಲೂಕು ಸಂಚಾಲಕ ಮಲ್ಲಿಕಾರ್ಜುನ ಸ್ವಾಮಿ, ಕಪ್ರಾರೈಸಂ ತಾಲೂಕು ಕಾರ್ಯದರ್ಶಿ ಖಲಂದರ್ ಭಾಷಾ, ಗ್ರಾಪಂ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಭೀಮಣ್ಣ ಮೆಟ್ರಿಕಿ, ಪ್ರಮುಖರಾದ ಡಾ.ಎಸ್.ರಹಮತುಲ್ಲಾ, ಶಂಕ್ರಣ್ಣ ನಾಡಿಗರ್, ಎಚ್.ದುರ್ಗಮ್ಮ ಕೊಂಡಾಪುರ, ಸುನಿತಾ ಸಂಡೂರು, ಹುಲಿಗೆಮ್ಮ, ವಾಸಂತಿ ಸೋಮ್ಲಾಪುರ ಇತರರಿದ್ದರು.