ಮೇ 20ರಂದು ಕಾರ್ಮಿಕರಿಂದ ಮುಷ್ಕರ

CITU
Published on

ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಮಾಹಿತಿ

ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕ ಸಂಹಿತೆಗಳ ಅನುಷ್ಠಾನ ಮತ್ತು ಕಾರ್ಮಿಕ ಮೂಲ ಹಕ್ಕುಗಳನ್ನು ದಮನ ಮಾಡುತ್ತಿದೆ. ಅಲ್ಲದೆ, ಅಲ್ಲದೆ, ಬಂಡವಾಳಶಾಹಿಗಳಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ನೀತಿಗಳನ್ನು ರೂಪಿಸುತ್ತಿವೆ. ಕಾರ್ಮಿಕರ ಹಿತ ಕಾಯಲು ಇದ್ದ 29ಕ್ಕೂ ಹೆಚ್ಚು ಕಾಯಿದೆಗಳನ್ನು ರದ್ದು ಮಾಡಿದೆ. ಇದನ್ನು ಖಂಡಿಸಿ ಮೇ 20ರಂದು ದೇಶವ್ಯಾಪಿ ಕಾರ್ಮಿಕರು ಸಾರ್ವತ್ರಿಕ ಮುಷ್ಕರ ನಡೆಸಲಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಸಹ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ, ಖಂಡನಾ ಸಭೆ ನಡೆಯಲಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಮಹಾಂತೇಶ ತಿಳಿಸಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಮೇ 13ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗಿನ ಸಮೀಕ್ಷೆ ಪ್ರಕಾರ ಬೃಹತ್​ ಬಂಡವಾಳಶಾಹಿಗಳ ಆದಾಯ 10 ಪಟ್ಟು ಏರಿಕೆಯಾಗಿದೆ. ಆದರೆ, ಸಂಘಟಿತ ವಲಯಗಳ ಕಾರ್ಮಿಕರ ವೇತನ 2023-24ನೇ ಸಾಲಿನಲ್ಲಿ 2017-18ನೇ ಸಾಲಿನ ಸರಾಸರಿ ಮಟ್ಟಕ್ಕಿಂತ ಕೆಳಗೆ ತಲುಪಿದೆ. ಲಕ್ಷಾಂತರ ಕಾರ್ಮಿಕರಿಗೆ ಸೇವಾ ಭದ್ರತೆ, ಇಎಸ್​ಐ, ಪಿಎಫ್​ ಸೌಲಭ್ಯವೂ ಲಭಿಸುತ್ತಿಲ್ಲ. ದಿನದಲ್ಲಿ ಗರಿಷ್ಠ ಅವಧಿಗೆ ಮಾಲೀಕರು ನೌಕರರನ್ನು ದುಡಿಸುತ್ತಿದ್ದಾರೆ. ದಿನದಲ್ಲಿ 12 ತಾಸಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಬೇಕಿದ್ದು, ವೈಯಕ್ತಿಕ ಕೆಲಸ ಮಾಡಿಕೊಳ್ಳಲೂ ಆಗದ ದುಸ್ಥಿತಿ ಬಂದಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕರ ಹಿತಕಾಯದ 4 ಸಂಹಿತೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದರು.

28 ಬೇಡಿಕೆ ಈಡೇರಿಸುವಂತೆ ಒತ್ತಾಯ

ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ದಿನದಲ್ಲಿ 8 ಗಂಟೆ ಕೆಲಸದ ಅವಧಿ, ಕೆಲಸ ಕಾಯಮಾತಿ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ ಹಾಗೂ ಮುಷ್ಕರ ಮಾಡುವ ಹಕ್ಕು ಸೇರಿದಂತೆ ಕಾರ್ಮಿಕ, ಶ್ರಮಿಕ, ರೈತಾಪಿ ವಲಯಗಳ ಹಿತದೃಷ್ಟಿಯಿಂದ 28 ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಸಭೆ ನಡೆಯಲಿದೆ. ಉಡುಪಿಯಲ್ಲಿ ಹಳೆಯ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಹೊರಟು ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಸಭೆ ನಡೆಯಲಿದೆ. ಬೈಂದೂರು, ಕುಂದಾಪುರ ತಾಲೂಕಿನಲ್ಲೂ ಸಹ ಸಹಸ್ರ ಸಂಖ್ಯೆಯಲ್ಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ದೇಶದ ಕಾರ್ಮಿಕ ವರ್ಗವನ್ನು ಗುಲಾಮಗಿರಿಗೆ ತಳ್ಳುವ ನಾಲ್ಕು ಕಾರ್ಮಿಕ ಸಂಹಿತೆಗಳು ಎಂಬ ಪುಸ್ತಕವನ್ನು ಕೆ.ಮಹಾಂತೇಶ ಬಿಡುಗಡೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳಾದ ಕವಿರಾಜ ಎಸ್​. ಕಾಂಚನ್​, ಶೇಖರ ಬಂಗೇರ, ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಕೋಶಾಧಿಕಾರಿ ಶಶಿಧರ ಗೊಲ್ಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net