

ಹುಬ್ಬಳ್ಳಿ : ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಸಹಯೋಗದೊಂದಿಗೆ ಸಿಐಟಿಯು ವತಿಯಿಂದ ಡಿ. 1ರಂದು ರಾಜ್ಯದಲ್ಲಿರುವ ಕೇಂದ್ರ ಸಚಿವರ ಕಚೇರಿ ಅಥವಾ ಮನೆಗಳ ಎದುರು ಅನಿರ್ದಿಷ್ಟ ಅವಧಿಯ ಹೋರಾಟ ನಡೆಸಲು ಕರೆ ನೀಡಲಾಗಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ, ದೇಶಾದ್ಯಂತ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿರುವ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರ ಕಚೇರಿ ಅಥವಾ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಬೇಡಿಕೆ ಈಡೇರಿಕೆಗೆ ನವೆಂಬರ್ ಮೂರನೇ ವಾರದಲ್ಲಿ ಎಲ್ಲ ಸಂಸದರಿಗೆ ಮನವಿ ಸಲ್ಲಿಸಲಾಗುವುದು. ಡಿ. 1ರಂದು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಚೇರಿ ಎದುರು ನಡೆಯಲಿರುವ ಪ್ರತಿಭಟನೆಯಲ್ಲಿ ಉತ್ತರ ಕನ್ನಡ, ಬಾಗಲಕೋಟ, ವಿಜಯಪುರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳ ಕಾರ್ಯಕರ್ತೆಯರು ಪಾಲ್ಗೊಳ್ಳುವರು. ಅದೇ ರೀತಿ ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರ ನಿವಾಸ ಅಥವಾ ಕಚೇರಿಗಳ ಎದುರು ವಿವಿಧ ಜಿಲ್ಲೆಗಳ ಸಾವಿರಾರು ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
2010 ರಿಂದ ಬಿಸಿಯೂಟದ ನೌಕರರಿಗೆ ಹಾಗೂ 2018 ರಿಂದ ಅಂಗನವಾಡಿ ನೌಕರರಿಗೆ ವೇತನ ಹೆಚ್ಚಳ ಮಾಡಿಲ್ಲ. ಈಗಲಾದರೂ ವೇತನ ಹೆಚ್ಚಿಸಬೇಕು. ಬಿಸಿಯೂಟ ನೌಕರರಿಗೆ 6 ತಾಸಿನ ಕೆಲಸದ ಅವಧಿಗೆ ಆದೇಶ ನೀಡಬೇಕು. ಅಡುಗೆ ಮಾಡುವಾಗ ಅನುಭವಿಸುವ ಅವಘಡಗಳಿಗೆ ಪರಿಹಾರ ಮೊತ್ತ ಹೆಚ್ಚಿಸಬೇಕು, ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಎಚ್.ಎಸ್. ಸುನಂದಾ, ಲಕ್ಷ್ಮೀದೇವಿ, ಮಾಲಿನಿ ಮೇಸ್ತಾ, ಮಹೇಶ ಪತ್ತಾರ ಸುದ್ದಿಗೋಷ್ಠಿಯಲ್ಲಿ ಇದ್ದರು.