ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹ: ನಗರದಲ್ಲಿ ಸಿಐಟಿಯು ಪ್ರತಿಭಟನೆ

CITU activists protest Mandya
Published on

ಮಂಡ್ಯ: ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು, ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು. ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೇಡಿಕೆ ಈಡೇರಿಸಬೇಕೆಂದು ಘೋಷಣೆ ಕೂಗಿದರು.

ಅದರಂತೆ ಸಂಹಿತೆ ಹಿಂಪಡೆಯಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವುದರ ಜತೆಗೆ ಬಡವರು ಬದುಕಲು ಅವಕಾಶ ಕಲ್ಪಿಸುವ ನೀತಿಯನ್ನು ಜಾರಿಗೊಳಿಸಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡುವುದರ ಜತೆಗೆ ಎಂಪಿಎಂಸಿ ಬಲವರ್ಧನೆಗೊಳಿಸಬೇಕು. ಕೃಷಿ ಹಿಡುವಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಡಬೇಕು. ದೇಶದ ಐಕ್ಯತೆ ಹಾಳು ಮಾಡುವ ಶಕ್ತಿಗಳನ್ನು ನಿಗ್ರಹಿಸಿ ಧರ್ಮನಿರಪೇಕ್ಷ ಮೌಲ್ಯವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ಕೈಬಿಡಬೇಕು. ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಬಾರದು. ಅಕುಶಲ ಕಾರ್ಮಿಕರಿಗೆ ಮಾಸಿಕ 31 ಸಾವಿರ ರೂ ಕನಿಷ್ಟ ವೇತನ ಹಾಗೂ ಕೌಶಲದ ಪ್ರತಿ ಹಂತಕ್ಕೆ ಶೇ.15ಕ್ಕೆ ಹೆಚ್ಚಳದೊಂದಿಗೆ ನಿಗದಿಪಡಿಸಬೇಕು. ಕೆಲಸದ ಅವಧಿಯನ್ನು ವಾರಕ್ಕೆ ಗರಿಷ್ಟ 36 ಗಂಟೆ ಹಾಗೂ ದಿನದ ಪಾಳಿಯನ್ನು 6 ಗಂಟೆಗೆ ಮಿತಿಗೊಳಿಸಬೇಕು. ಉದ್ಯೋಗ ಸೃಷ್ಟಿಸುವತ್ತಾ ಗಮನಕೊಡಬೇಕು. ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕೊನೆಗಾಣಿಸಬೇಕು. ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರುಸ್ಥಾಪಿಸಬೇಕು. ಎಪಿಎಸ್ ಪಿಂಚಣಿದಾರರಿಗೆ ಕನಿಷ್ಟ 9 ಸಾವಿರ ರೂ ಪಿಂಚಣಿ ನೀಡಬೇಕು. ಪ್ರತಿ ಜಿಲ್ಲಾಮಟ್ಟದಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಿ ಕೈಗಾರಿಕೆ ವಿವಾದವನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಲಾಗಿರುವ ಸಾಮಾಜಿಕ ಭದ್ರತಾ ಮಂಡಳಿಯನ್ನು ಬಲಪಡಿಸುವುದು ಸೇರಿದಂತೆ 36 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಶಶಿಕಲಾ, ಮಂಗಳಾ, ಗಾಯತ್ರಿ, ಜಯಶೀಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net