

ತುಮಕೂರು : ಅಂಗನವಾಡಿ ನೌಕರರಿಗೆ ತರಬೇತಿ ನೀಡಿ ಇಸಿಸಿಇ ಮಾರ್ಗದರ್ಶನ ಪ್ರಕಾರ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಟ್ಟಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡಬೇಕು ಎಂದು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಸೋಮವಾರ ರಾಜ್ಯ ಆಂಗನವಾಡಿ ನೌಕರ ಸಂಘ ಸಿಐಟಿಯು ಸದಸ್ಯರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್‌ಭಾನು ಮಾತನಾಡಿ, ಬದಲಾದ ಸಮಾಜದ ರೀತಿಯಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಬೇಕು. ಆದ್ದರಿಂದ ಅಂಗನವಾಡಿ ಕೇಂದ್ರಗಳನ್ನು ಪಾಲನಾ ಮತ್ತು ಕಲಿಕೆ ಕೇಂದ್ರಗಳನ್ನಾಗಿಸಬೇಕು ಎಂದರು.
ಸಂಘದ ಜಿಲ್ಲಾ ಅಧ್ಯಕ್ಷೆ ಕಮಲಾ ಮಾತನಾಡಿ, ಎನ್‌ಇಪಿ ಆಶಯಗಳು ಬೆಟ್ಟದಷ್ಟಿವೆ. ಆದರೆ, ಜಾರಿಯ ಸಂದರ್ಭದಲ್ಲಿ ಸಂಪೂರ್ಣವಾಗಿ ಖಾಸಗೀಕರಣ ಮತ್ತು ವಾಣಿಜ್ಯೀಕರಣವಾಗುವ ಅಂಶಗಳೇ ಹೆಚ್ಚಾಗಿವೆ ಎಂದರು.
ಐಸಿಡಿಎಸ್ ಯೋಜನೆಗೆ ಸಂಬಂಧಿಸಿ 3 ರಿಂದ 6 ವರ್ಷ ಅಂದರೆ 36 ತಿಂಗಳ ಮಗುವಿನಿಂದ 5 ವರ್ಷ 10 ತಿಂಗಳ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಲಾಗುತ್ತಿದ್ದರು. ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಅನಿಯಮಿತವಾಗಿ ನರ್ಸರಿ ಆರಂಭವಾಗಿದ್ದರಿಂದ ಅಂಗನವಾಡಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದರು.
ಎನ್‌ಇಪಿಯ ಪ್ರಕಾರ 5 ವರ್ಷದ ಮಕ್ಕಳಿಗೆ ಬಾಲವಾಟಿಕಾ ಎನ್ನುವ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಅಂಗನವಾಡಿಗಳಲ್ಲಿ ಕೇವಲ 3 ವರ್ಷದ ಮಕ್ಕಳು ಇರುತ್ತಾರೆ. ಇದರಿಂದ ಅಂಗನವಾಡಿ ಕೇಂದ್ರಗಳು ನಿಧಾನಗತಿಯಲ್ಲಿ ಮಕ್ಕಳೇ ಇಲ್ಲದ ಪರಿಸ್ಥಿತಿ ಸಂಭವಿಸುತ್ತದೆ ಎಂದರು.
1974 ಮಕ್ಕಳ ರಾಷ್ಟ್ರೀಯ ನೀತಿ, 1975ರ ಐಸಿಡಿಎಸ್ ಯೋಜನೆಯ ಉದ್ದೇಶ, 2002ರ ವಿಶ್ವ ಸಂಸ್ಥೆಯ ಪೋಷಣೆ 2013ರ ಮಕ್ಕಳ ರಾಷ್ಟ್ರೀಯ ನೀತಿ ಮತ್ತು ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.
ಸಂಘದ ತುಮಕೂರು ತಾಲೂಕು ಅಧ್ಯಕ್ಷೆ ಗಂಗಾ ಮಾತನಾಡಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮತ್ತು ಐಎಲ್‌ಸಿ ಶಿಫಾರಸಿನಂತೆ ನೌಕರರಂತೆ ಗುರುತಿಸಿ ಕನಿಷ್ಠ ವೇತನ ಜಾರಿ ಮಾಡಬೇಕು ಎಂದರು. ಪ್ರತಿಭಟನೆಯಲ್ಲಿ ತುಮಕೂರು ತಾಲೂಕು ಅಧ್ಯಕ್ಷೆ ಗೌರಮ್ಮ, ಖಚಾಂಜಿ ಜಬಿನಾ ಖಾತೋನ್, ಪ್ರಧಾನ ಕಾರ್ಯದರ್ಶಿ ವಿನೋದ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕಾರ್ಯಕರ್ತರಾದ ಲಕ್ಷ್ಮೀ, ಸುಶಿಲಾ, ಗೌರಮ್ಮ ಇದ್ದರು.