ಮರೆಯಾಗಿದೆ ಸಮಾನತೆ, ನ್ಯಾಯ, ಪ್ರಾಮಾಣಿಕತೆ ; ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಅಸಮಾಧಾನ

001
Published on

ತುಮಕೂರು : ಕರೊನಾ ಸಂಕಷ್ಟದಲ್ಲಿಯೂ ಸರ್ಕಾರಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದನ್ನು ಬಿಟ್ಟು, ತಮ್ಮ ಸ್ವಾರ್ಥಕ್ಕಾಗಿ ಅನ್ಯಾಯದೆಡೆಗೆ ಸಾಗಿದ್ದವು. ಇದನ್ನು ಸುಪ್ರೀಂ ಮತ್ತು ಹೈಕೋರ್ಟ್ ಕೂಡ ಪ್ರಶ್ನಿಸಿ ನ್ಯಾಯಕೊಡುವಲ್ಲಿ ಮಹತ್ವದ ಪಾತ್ರವಹಿಸಿದವು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಸುಫಿಯಾ ಕಾನೂನು ಕಾಲೇಜು ಹಾಗೂ ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ‘ಡಾ.ರಮೇಶ್ ಅಭಿನಂದನಾ ಸಮಾರಂಭ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಮತ್ತು ನ್ಯಾಯಾಂಗದ ಪ್ರಸ್ತುತತೆ’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ರಾಷ್ಟ್ರದೆಲ್ಲೆಡೆ ಸವಾನತೆ, ನ್ಯಾಯ, ಪ್ರಾಮಾಣಿಕತೆ ಮರೆಯಾಗಿ ಅಧರ್ಮ, ಆನ್ಯಾಯ ಅಕ್ರಮಗಳೇ ಹೆಚ್ಚಾಗುತ್ತಿವೆ. ಇತ್ತೀಚೆಗಿನ ಪ್ರವೃತ್ತಿಗಳಂತೂ ಇನ್ನು ಮಿತಿ ಮೀರಿವೆ. ಇದನ್ನೆಲ್ಲಾ ಪ್ರಶ್ನಿಸುವವರೇ ಇಲ್ಲದಂತಾಗಿರುವುದು ಬೇಸರದ ಸಂಗತಿ. ಕರೊನಾ ಸಂದರ್ಭದಲ್ಲಿ ನ್ಯಾಯಾಂಗದ ಕೊಡುಗೆ ಅಪಾರವಾಗಿತ್ತು. ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆಯಿದ್ದಾಗ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡದೇ ಹೋಗದಿದ್ದರೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿತ್ತು ಎಂದರು.

ರಾಮನಗರ ಸ್ನಾತಕೋತ್ತರಕೇಂದ್ರದ ವಿಶೇಷಾಧಿಕಾರಿ ಪ್ರೊ.ಡಿ.ಡೊಮಿನಿಕ್ ಮಾತನಾಡಿ, ಅತೀ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಆಧುನೀಕರಣದಿಂದ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ, ಅಸತ್ಯ ಅನ್ಯಾಯ ರಾರಾಜಿಸುತ್ತಿದೆ. ನೂತನ ತಂತ್ರಜ್ಞಾನದಿಂದ ಅಭಿವ್ಯಕ್ತಿ ಸ್ವಾತಂತ್ರ್ಯವು ಹರಣವಾಗುತ್ತಿದೆ ಎಂದರು.

ಮಾಧ್ಯಮಗಳು ಗುಣಮಟ್ಟದ ಸುದ್ದಿ ಬಿಟ್ಟು ಬೇರೆಲ್ಲವನ್ನು ತೋರಿಸುತ್ತಿದೆ, ಹೀಗೆ ಮುಂದುವರಿದಲ್ಲಿ ಇದು ಇನ್ನು ಯಾವ ಹಂತ ತಲುಪುತ್ತದೆಯೋ, ಜಾತಿ, ಮತ, ಪಂಥ ಎಂದು ಕಚ್ಚಾಡುತ್ತಾ ನಾವೇ ಅವನತಿಯತ್ತ ಸಾಗುತ್ತಿದ್ದೇವೆ ಇದು ಬದಲಾಗಬೇಕಿದೆ ಎಂದು ಆತಂಕಿಸಿದರು.

ಕಾನೂನು ವಿಭಾಗದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಡಾ.ಎಸ್.ರಮೇಶ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ತುಮಕೂರಿನ ವಕೀಲರ ಸಂದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ, ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net