ಪೌರತ್ವ ಜನಜಾಗೃತಿ ಅಭಿಯಾನಕ್ಕೆ ತಡೆ, ಹೊಸಪೇಟೆಯ ಛಲವಾದಿ ಕೇರಿಯಲ್ಲಿ ತೀವ್ರ ವಿರೋಧ

060120 Hospate Citizenship Awarness Programme
Published on

ಹೊಸಪೇಟೆ: ನಗರದ ಛಲವಾದಿ ಕೇರಿಯಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಕೇರಿ ಪ್ರವೇಶ ದ್ವಾರದಲ್ಲೇ ತಡೆದ ದಲಿತ ಹಾಗೂ ಮುಸ್ಲಿಂ ಯುವಕರು ಗೋಬ್ಯಾಕ್ ಗೋಬ್ಯಾಕ್ ಎಂದು ಘೋಷಣೆ ಕೂಗಿ ಹಿಮ್ಮೆಟ್ಟಿಸಿದರು.

ಶ್ರೀತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರಸಿಂಗ್, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಸಾಲಿಸಿದ್ದಯ್ಯಸ್ವಾಮಿ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಯುವಕರ ಮನವೊಲಿಸುವಲ್ಲಿ ಮುಖಂಡರು ಹೈರಣಾದರು. ಮಾತಿನ ಚಕಮಕಿಯಿಂದ ಉದ್ವಿಗ್ನತೆ ಉಂಟಾಗಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಎರಡು ಗುಂಪುಗಳು ಹಠ ಹಿಡಿದರೆ, ಪರಿಸ್ಥಿತಿ ಕೈಮೀರಲಿದೆ ಎಂದು ಎಚ್ಚರಿಸಿದರು. ಕರಪತ್ರ ಹಿಡಿದು ಬಂದಿದ್ದ ಬಿಜೆಪಿ ಮುಖಂಡರು ಅಲ್ಲಿಂದ ಕಾಲ್ಕಿತ್ತರು. ಮುಖ್ಯರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದರು.

ಪ್ರಗತಿಪರ ಚಿಂತಕ ಸಂತೋಷ ಎಚ್.ಎಲ್. ಮಾತನಾಡಿ, ರಾಮಾ ಟಾಕೀಸ್ ಹಿಂಭಾಗದ ಎಸ್.ಆರ್.ನಗರದಲ್ಲಿ ಮಾತ್ರ ಜನಜಾಗೃತಿ ಅಭಿಯಾನ ನಡೆಸುವುದಾಗಿ ಹೇಳಿದ ಬಿಜೆಪಿ ಮುಖಂಡರು ಛಲವಾದಿ ಕೇರಿಗೆ ನುಗ್ಗಿದ್ದರಿಂದ ವಿರೋಧ ವ್ಯಕ್ತಪಡಿಸಿದ್ದೇವೆ. ನಮ್ಮಿಂದ ಆನಂದಸಿಂಗ್ ಶಾಸಕರಾಗಿದ್ದಾರೆ. ನಮಗೂ ತಿಳಿವಳಿಕೆಯಿದೆ. ಹಿರಿಯರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಎಚ್.ಎನ್.ಇಮಾಮ್ ನಿಯಾಜಿ, ಫಹಿಂ ಬಾಷಾ, ನಗರಸಭೆ ಮಾಜಿ ಅಧ್ಯಕ್ಷ ಅಬ್ದುಲ್ ಖದೀರ್, ಮಾಜಿ ಸದಸ್ಯ ಬಡಾವಲಿ ಇತರರಿದ್ದರು.

"ಛಲವಾದಿ ಕೇರಿಯಲ್ಲಿ ಹಿರಿಯರ ಮಾತಿಗೆ ಬೆಲೆಕೊಟ್ಟು, ಶಾಂತಿ ಕಾಪಾಡಲು ಹಿಂದಕ್ಕೆ ಬಂದಿದ್ದೇವೆ. ಜ.7 ರಂದು ಶಾಸಕ ಆನಂದಸಿಂಗ್ ಜತೆ ತೆರಳಿ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜಾಗೃತಿ ಮೂಡಿಸಲಾಗುವುದು."
| ಬಸವರಾಜ ನಾಲತ್ವಾಡ ಮಂಡಲ ಅಧ್ಯಕ್ಷ, ಬಿಜೆಪಿ ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net